ಏರ್ ಇಂಡಿಯಾಗೆ ಬೆದರಿಕೆ ; ಪಂಜಾಬ್, ದೆಹಲಿ ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ತಪಾಸಣೆ
ಏರ್ ಇಂಡಿಯಾ | Photo: PTI
ಹೊಸದಿಲ್ಲಿ: ಕಾನೂನುಬಾಹಿರ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (SFJ) ನಿಂದ ಬಂದ ಬೆದರಿಕೆಯ ನಂತರ ಪಂಜಾಬ್ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚುವರಿ ಭದ್ರತಾ ತಪಾಸಣೆಗೆ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಆದೇಶಿಸಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
BCAS ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿಯ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಏರ್ ಇಂಡಿಯಾ ವಿಮಾನಗಳಿಗೆ ಹೆಚ್ಚುವರಿ ಭದ್ರತಾ ತಪಾಸಣೆಗೆ ಸೂಚಿಸಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
" ದಿಲ್ಲಿ ವಿಮಾನ ನಿಲ್ದಾಣ ಮತ್ತು ಪಂಜಾಬ್ನ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಏರ್ ಇಂಡಿಯಾ ವಿಮಾನಗಳಿಗೆ 100 ಶೇ. SLPC (ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್) ಮಾಡಲಾಗುವುದು. ತಾತ್ಕಾಲಿಕ ಏರ್ಪೋರ್ಟ್ ಪ್ರವೇಶ ಪಾಸ್ (TAEP), ಇಂದಿರಾ ಗಾಂಧಿ ಇಂಟರ್ನ್ಯಾಶನಲ್ ನ ಟರ್ಮಿನಲ್ ಗೆ ಭೇಟಿ ನೀಡುವ ಸಂದರ್ಶಕರನ್ನು ನಿಷೇಧಿಸಲಾಗಿದೆ” ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಸೋಮವಾರ ಈ ಆದೇಶ ಹೊರಡಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ನ.30 ರವರೆಗೆ ಈ ಭದ್ರತಾ ಕ್ರಮಗಳು ಜಾರಿಯಲ್ಲಿರುತ್ತವೆ.
ಇತ್ತೀಚೆಗೆ, ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (SFJ) ಸಂಸ್ಥಾಪಕ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್, ನ.19ರಂದು ಸಿಖ್ಖರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ ಎಂದು ಸಂಭಾವ್ಯ ದಾಳಿಯ ವೀಡಿಯೊವನ್ನು ಬಿಡುಗಡೆ ಮಾಡಿ ಹೇಳಿದ್ದನು.
1985ರ ಕನಿಷ್ಕ ವಿಮಾನ ದಾಳಿಯ ಮಾದರಿಯಲ್ಲಿ ದಾಳಿ ಮಾಡಬಹುದು ಎಂದು ಗುಪ್ತಚರ ಮೂಲಗಳು ಗ್ರಹಿಸಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ, ಗುಪ್ತಚರ ಸಂಸ್ಥೆಗಳಿಂದ ಸೂಚನೆ ಬಂದಿದೆ. ಸಂಭಾವ್ಯ ದಾಳಿಯನ್ನು ತಪ್ಪಿಸಲು ಭದ್ರತೆ ವ್ಯವಸ್ಥೆ ಬಿಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ಕಿಂಗ್ (ಎಸ್ಎಲ್ಪಿಸಿ) ಎಂಬುದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಯಿಂದ ಸೂಚಿಸಿದ ದ್ವಿತೀಯ ಹಂತದ ಭದ್ರತಾ ಕಾರ್ಯವಿಧಾನ. ಇದರನ್ವಯ ವಿಮಾನಯಾನ ಸಿಬ್ಬಂದಿಯು ಪ್ರಯಾಣಿಕರನ್ನು, ಅವರ ಲಗೇಜುಗಳನ್ನು ಸಿಐಎಸ್ಎಫ್ ಸೆಕ್ಯೂರಿಟಿ ಚೆಕ್ಕಿಂಗ್ ಮುಗಿದ ನಂತರ, ಬೋರ್ಡಿಂಗ್ ಮಾಡುವ ಮೊದಲು ಪರೀಕ್ಷಿಸಬೇಕಾಗುತ್ತದೆ.