ಏಕನಾಥ್ ಶಿಂಧೆ ಕಾರು ಸ್ಫೋಟಿಸುವ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು (Photo credit: ANI)
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಾರನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ ಸಂಬಂಧ ಶುಕ್ರವಾರ ಮುಂಬೈ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗೇಶ್ ಅಚ್ಯುತ್ ರಾವ್ ವಯಲ್ (35) ಹಾಗೂ ಅಭಯ್ ಗಜಾನನ್ ಶಿಂಗಾನೆ (22) ಎಂದು ಗುರುತಿಸಲಾಗಿದ್ದು, ಬುಲ್ಧಾನ ಪೊಲೀಸರ ನೆರವಿನೊಂದಿಗೆ ಮುಂಬೈ ಅಪರಾಧ ವಿಭಾಗದ ಪೊಲೀಸರ ತಂಡ ಈ ಇಬ್ಬರನ್ನು ಸೆರೆ ಹಿಡಿದಿದೆ.
ಬಂಧಿತ ಆರೋಪಿಗಳಿಬ್ಬರೂ ಮಹಾರಾಷ್ಟ್ರದ ದ್ಯೂಲ್ ಗಾಂವ್ ರಾಜಾ ತಾಲ್ಲೂಕಿನ ದ್ಯೂಲ್ ಗಾಂವ್ ಮಹಿ ಗ್ರಾಮದ ನಿವಾಸಿಗಳಾಗಿದ್ದು, ಅವರಿಬ್ಬರನ್ನು ಬುಲ್ಧಾನ ಜಿಲ್ಲೆಯ ದ್ಯೂಲ್ ಗಾಂವ್ ನಿಂದ ಬಂಧಿಸಿ ಮುಂಬೈಗೆ ಕರೆ ತರಲಾಗಿದೆ.
ಗುರುವಾರ ಗೋರೆಗಾಂವ್ ಪೊಲೀಸ್ ಠಾಣೆಗೆ ಶಿಂದೆ ಕಾರನ್ನು ಸ್ಫೋಟಿಸುವ ಬೆದರಿಕೆಯ ಇಮೇಲ್ ಬಂದ ನಂತರ, ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 351(3), 351(4), 353(2)ರ ಅಡಿ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.