ಸಂಸದ ತೇಜಸ್ವಿ ಸೂರ್ಯ ಹೆಸರಿನಲ್ಲಿ ಗುಜರಾತ್ ಬಿಜೆಪಿ ನಾಯಕನಿಗೆ ಬೆದರಿಕೆ ಕರೆ: ದೂರು ದಾಖಲು

ತೇಜಸ್ವಿ ಸೂರ್ಯ- ಸಂಸದರು
ಬೆಂಗಳೂರು: ಗುಜರಾತ್ನ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ನಾಯಕನಿಂದ ಹಣ ಹಾಗೂ ವಜ್ರ ಸುಲಿಗೆ ಮಾಡಲು ನನ್ನ ಮೊಬೈಲ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ದೂರು ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ದೂರನ್ನು ತೇಜಸ್ವಿ ಸೂರ್ಯರ ಆಪ್ತ ಕಾರ್ಯದರ್ಶಿಯಾದ ಬಾನು ಪ್ರಕಾಶ್ ಎಂಬುವವರು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ. ತೇಜಸ್ವಿ ಸೂರ್ಯ ಬಿಡುವಿಲ್ಲದಿರುವುದರಿಂದ ಅವರ ಫೋನ್ ನನ್ನ ಬಳಿಯೇ ಇದ್ದು, ಅದಕ್ಕೆ ಬರುವ ಕರೆಗಳಿಗೆ ನಾನೇ ಉತ್ತರಿಸುತ್ತಿದ್ದೇನೆ ಎಂದು ಬಾನು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 7ರಂದು ಗುಜರಾತ್ನ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷರಾದ ಪ್ರಶಾಂತ್ ಕೊರಟ್ ಅವರಿಗೆ ತೇಜಸ್ವಿ ಸೂರ್ಯರ ಪೋನ್ನಿಂದ ಕರೆ ಹೋಗಿದೆ. ನಂತರ ಅವರಿಗೆ ಕರೆ ಮಾಡಿರುವ ಪ್ರಶಾಂತ್ ಕೋರಟ್, ನಿಮ್ಮ ಮೊಬೈಲ್ ಸಂಖ್ಯೆಯಿಂದ ನನಗೆ ಬೆದರಿಕೆ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ. ಆದರೆ, ಯಾರೂ ನಿಮಗೆ ಕರೆ ಮಾಡಿಲ್ಲ ಎಂದು ತೇಜಸ್ವಿ ಸೂರ್ಯ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.
ಯಾರೋ ಮೊಬೈಲ್ ಫೋನ್ ಕದ್ದು, ಅದನ್ನು ಸ್ಥಳದಲ್ಲೇ ಬಿಟ್ಟು ಹೋಗುವ ಮುನ್ನ ಕೋರಟ್ ಅವರಿಗೆ ಕರೆ ಮಾಡಿದ್ದಾರೆ ಎಂದು ಬಾನು ಪ್ರಕಾಶ್ ಆರೋಪಿಸಿದ್ದಾರೆ.
ಈ ಸಂಬಂಧ ದಕ್ಷಿಣ ಸಿಇಎನ್ ಠಾಣೆಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(c) (ಗುರುತಿನ ಕಳವು) ಹಾಗೂ ಸೆಕ್ಷನ್ 66(d) (ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಿಕೊಂಡು ಸೋಗು ಹಾಕಿ ವಂಚನೆ) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 (ಸೋಗು ಹಾಕಿ ವಂಚನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.