ಜಮ್ಮು-ಕಾಶ್ಮೀರದಲ್ಲಿ ಮೂವರು ನಾಗರಿಕರ ಸಾವು ; ವಿವರಣೆ ಕೋರಿದ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ
Photo: PTI
ಹೊಸದಿಲ್ಲಿ: ಜಮ್ಮು ಹಾಗೂ ಕಾಶ್ಮೀರದ ಪೂಂಛ್-ರಾಜೌರಿ ಪ್ರದೇಶಗಳಲ್ಲಿ ಮೂವರು ನಾಗರಿಕರ ಸಾವಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಅತುಲ್ ದುಲ್ಲೂ ಅವರಿಗೆ ಬುಧವಾರ ನೋಟಿಸು ಜಾರಿ ಮಾಡಿದೆ.
ಈ ಘಟನೆ ಕುರಿತಂತೆ ಜನವರಿ 15ರ ಒಳಗೆ ವಿಸ್ತೃತ ವರದಿ ನೀಡುವಂತೆ ಕೂಡ ಅದು ಅತುಲ್ ದುಲ್ಲೂ ಅವರಿಗೆ ಸೂಚಿಸಿದೆ.
ಘಟನೆಯಲ್ಲಿ ಮೃತಪಟ್ಟ ನಾಗರಿಕರನ್ನು ಸಫೀರ್ ಹುಸೈನ್ (43), ಮುಹಮ್ಮದ್ ಶೌಕತ್ (27) ಹಾಗೂ ಶಬೀರ್ ಅಹ್ಮದ್ (32) ಎಂದು ಗುರುತಿಸಲಾಗಿದೆ. ಇವರು ಪರಿಶಿಷ್ಟ ಪಂಗಡದ ಗುಜ್ಜರ್-ಬಕರ್ವಾಲ್ ಸಮುದಾಯಕ್ಕೆ ಸೇರಿದವರು ಎಂದು ‘ದಿ ವೈರ್’ ವರದಿ ಮಾಡಿದೆ.
ನಾಲ್ವರು ಯೋಧರು ಮೃತಪಡಲು ಹಾಗೂ ಇಬ್ಬರು ಗಾಯಗೊಳ್ಳಲು ಕಾರಣವಾದ ಡಿಸೆಂಬರ್ 22ರಂದು ಯೋಧರ ವಾಹನದ ಮೇಲೆ ಶಂಕಿತ ಉಗ್ರರು ನಡೆಸಿದ ಹೊಂಚು ದಾಳಿಗೆ ಸಂಬಂಧಿಸಿ ವಿಚಾರಣೆ ನಡೆಸಲು ಸೇನೆ ಕರೆದೊಯ್ದ 8 ಮಂದಿ ನಾಗರಿಕರಲ್ಲಿ ಇವರು ಕೂಡ ಸೇರಿದ್ದರು. ಉಳಿದ ಐವರು ನಾಗರಿಕರಿಗೆ ಚಿತ್ರಹಿಂಸೆ ನೀಡಲಾಗಿದೆ. ಗಂಭೀರ ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದೊಂದಿಗೆ ಸಂಬಂಧ ಹೊಂದಿರುವ ದಿಲ್ಲಿ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಸದ್ದಾಂ ಮುಜೀಬ್ ಅವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಕೇಂದ್ರಾಡಳಿತ ಪ್ರದೇಶಕ್ಕೆ ನೋಟಿಸು ಜಾರಿ ಮಾಡಿದೆ.
ನಾಗರಿಕರಿಗೆ ಸೇನೆ ನೀಡಿರುವ ಚಿತ್ರಹಿಂಸೆಯನ್ನು ವಿವರಿಸುವ ವರದಿಯೊಂದಿಗೆ ಮುಜೀಬ್ ಅವರು ಆಯೋಗಕ್ಕೆ ಪತ್ರ ಬರೆದಿದ್ದರು. ಚಿತ್ರಹಿಂಸೆಗೆ ಗುರಿಯಾದವರಿಗೆ ಸಾಕಷ್ಟು ವೈದ್ಯಕೀಯ ನೆರವು ನೀಡುವಂತೆ ಅವರು ಕೋರಿದ್ದರು. ಅಲ್ಲದೆ, ಸಂತ್ರಸ್ತರು ಹಾಗೂ ಅವರ ಕುಟುಂಬಗಳಿಗೆ ಸಾಕಷ್ಟು ಪರಿಹಾರ ನೀಡುವಂತೆ ಆಗ್ರಹಿಸಿದ್ದರು.
ಈ ದೂರಿನಲ್ಲಿ ಮುಜೀಬ್ ಕಳೆದ ಒಂದು ವಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಿದ್ದ 29 ಸೆಕೆಂಡುಗಳ ವೀಡಿಯೊದ ಕುರಿತು ಮಾತನಾಡಿದ್ದಾರೆ. ಸೇನಾ ಸಿಬ್ಬಂದಿ ಮೂವರನ್ನು ನಗ್ನಗೊಳಿಸಿದ್ದಾರೆ. ಗಾಯಗಳಿಗೆ ಮೆಣಿಸಿನ ಹುಡಿ ಎರಚುವುದು ಸೇರಿದಂತೆ ತೀವ್ರವಾದ ಚಿತ್ರಹಿಂಸೆಗೆ ಅವರನ್ನು ಗುರಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.