ಗುಜರಾತ್ನ ಅಕ್ರಮ ಗಣಿಯಲ್ಲಿ ವಿಷಾನಿಲ ಸೇವಿಸಿ ಮೂವರ ಮೃತ್ಯು
ಸಾಂದರ್ಭಿಕ ಚಿತ್ರ
ಸುರೇಂದ್ರನಗರ್ (ಗುಜರಾತ್) : ಮೂವರು ಕಾರ್ಮಿಕರು ವಿಷಾನಿಲ ಸೇವಿಸಿ ಮೃತಪಟ್ಟಿರುವ ಘಟನೆ ಗುಜರಾತ್ನ ಸುರೇಂದ್ರನಗರ್ ಜಿಲ್ಲೆಯಲ್ಲಿನ ಅಕ್ರಮ ಗಣಿಯೊಂದರಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಾಲ್ವರ ವಿರುದ್ಧ ಹತ್ಯೆಯಲ್ಲದ ನರಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಶನಿವಾರ ತಂಗಢ್ ತಾಲ್ಲೂಕಿನ ಭೇಟ್ ಗ್ರಾಮದ ಬಳಿಯಿರುವ ಗಣಿಯೊಂದನ್ನು ಅಗೆಯುವಾಗ ವಿಷಾನಿಲ ಸೇವಿಸಿ ಲಕ್ಷ್ಮಣ್ (35), ಖೊಡಭಾಯಿ ಮಕ್ವಾನಾ (32) ಹಾಗೂ ಕೆರಾಲಿಯ (35) ಎಂಬ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮುಲಿ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅವರು ಗಣಿಯಲ್ಲಿ ಕೆಲಸ ಮಾಡುವಾಗ, ಅವರಿಗೆ ಶಿರಸ್ತ್ರಾಣ, ಮುಖಗವಸು ಅಥವಾ ಇನ್ನಾವುದೇ ಸುರಕ್ಷತಾ ಸಾಧನಗಳನ್ನು ಒದಗಿಸಿರಲಿಲ್ಲವೆಂದು ಅವರು ತಿಳಿಸಿದ್ದಾರೆ.
ಜಶಭಾಯಿ ಕೆರಾಲಿಯ, ಜಾನಕ್ ಅನಿಯಾರಿಯ, ಖಿಮ್ಜಿಭಾಯಿ ಕೆರಾಲಿಯ ಹಾಗೂ ಕಲ್ಪೇಶ್ ಪಾರ್ಮರ್ ಎಂಬ ಆರೋಪಿಗಳ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಫೆಬ್ರವರಿ ತಿಂಗಳ ಆರಂಭದಲ್ಲೂ ಕೂಡಾ ಅಕ್ರಮ ಗಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಜಿಲಾಟಿನ್ ಕಡ್ಡಿಯಿಂದ ಹೊಮ್ಮಿದ ವಿಷಾನಿಲ ಸೇವಿಸಿ ಮೃತಪಟ್ಟಿದ್ದ ಘಟನೆ ನಡೆದಿತ್ತು.