ಬಾವಿ ಸ್ವಚ್ಛಗೊಳಿಸುವಾಗ ವಿಷಾನಿಲ ಸೇವಿಸಿ ಮೂವರು ಮೃತ್ಯು
ಸಾಂದರ್ಭಿಕ ಚಿತ್ರ | PC : NDTV
ಅಗರ್ತಲ: ಬಾವಿ ಸ್ವಚ್ಛಗೊಳಿಸುವಾಗ, ಅದರಿಂದ ಹೊರ ಬಂದ ವಿಷಾನಿಲ ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ತ್ರಿಪುರದ ಸೆಪಾಹಿಜಲ ಜಿಲ್ಲೆಯಲ್ಲಿ ನಡೆದಿದೆ ಎಂದು ರವಿವಾರ ಪೊಲೀಸರು ತಿಳಿಸಿದ್ದಾರೆ.
ಸೋನಾಮುರ ಪ್ರಾಂತ್ಯದಲ್ಲಿ ನೀರಿನ ಅಭಾವ ತಲೆದೋರಿದ್ದರಿಂದ ಆ ಭಾಗದ ಗ್ರಾಮಸ್ಥರು ಶನಿವಾರ ನಿಯೊರಮುರ ಜೆ.ಬಿ.ಶಾಲೆಯ ಆವರಣದಲ್ಲಿರುವ ಬಾವಿಯ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು, ಸ್ವಚ್ಛತಾ ಕಾರ್ಯಕ್ಕಾಗಿ ಬಾವಿಗಿಳಿದಿದ್ದ ಮೂವರು ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅವರು ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸೋನಾಮುರದ ಉಪ ಪೊಲೀಸ್ ವರಿಷ್ಠಾಧಿಕಾರಿ ಶಶಿ ಮೋಹನ್ ದೆಬ್ಬರ್ಮ, “ಅವರು ಸಂಪೂರ್ಣಮಯವಾಗಿ ವಿಷಮಯ ಅನಿಲವನ್ನು ಹೊಂದಿದ್ದ ಬಾವಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿರುವಂತಿದೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಸಾವಿನ ನೈಜ ಕಾರಣ ತಿಳಿದು ಬರಲಿದೆ” ಎಂದು ಹೇಳಿದ್ದಾರೆ.