ಮಣಿಪುರದಲ್ಲಿ ಮತ್ತೆ ಡ್ರೋನ್ ದಾಳಿ: ಮೂವರಿಗೆ ಗಾಯ
'ಭಯೋತ್ಪಾದನಾ ಕೃತ್ಯ' ಎಂದ ಸಿಎಂ ಬಿರೇನ್ ಸಿಂಗ್
Photo: PTI
ಮಣಿಪುರ: ಇಂಫಾಲ್ ಪಶ್ಚಿಮ ಜಿಲ್ಲೆಯ ಸೆಂಜಮ್ ಚಿರಾಂಗ್ ಮಾನಿಂಗ್ ಲೈಕೈ ಎಂಬ ಹಳ್ಳಿಯಲ್ಲಿ ಡ್ರೋನ್ ಮೂಲಕ ಬಾಂಬ್ ದಾಳಿಯನ್ನು ನಡೆಸಲಾಗಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ, ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ಮಣಿಪುರದ ಸಿಎಂ ಬಿರೇನ್ ಸಿಂಗ್ ಖಂಡಿಸಿದ್ದಾರೆ.
ಲೈಕೈ ಎಂಬ ಹಳ್ಳಿ ಗುಡ್ಡಗಾಡು ಕಾಂಗ್ಪೊಕ್ಪಿ ಜಿಲ್ಲೆಯ ಜಿಲ್ಲೆಯ ಗಡಿಯ ಸಮೀಪದಲ್ಲಿದೆ. ರವಿವಾರ ಕೌತ್ರುಕ್ ಪ್ರದೇಶದಲ್ಲಿ ಬಂದೂಕು ಮತ್ತು ಬಾಂಬ್ ದಾಳಿಯಲ್ಲಿ ಶಸಸ್ತ್ರದಾರಿಗಳ ಗುಂಪು ಇಬ್ಬರನ್ನು ಕೊಂದು 9 ಮಂದಿಯನ್ನು ಗಾಯಗೊಳಿಸಿದ್ದರು. ಘಟನೆ ನಡೆದ ಸ್ಥಳವು ಈ ಪ್ರದೇಶಕ್ಕೆ ಸಮೀಪದಲ್ಲಿದೆ.
ಕಾಂಗ್ಪೊಕ್ಪಿ ಜಿಲ್ಲೆಯ ತಗ್ಗು ಪ್ರದೇಶದ ಸೆಜಮ ಚಿರಾಂಗ್ ಗ್ರಾಮದ ಮೇಲೆ ಶಸಸ್ತ್ರದಾರಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಅವರನ್ನು ಹಿಮ್ಮೆಟ್ಟಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಟ್ಟ ಮತ್ತು ಕಣಿವೆ ಜಿಲ್ಲೆಗಳ ಪ್ರದೇಶಗಳಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ನಡೆದಿದೆ. ಈ ವೇಳೆ. 12-ಇಂಚಿನ ಸಿಂಗಲ್-ಬೋರ್ ಬ್ಯಾರೆಲ್ ರೈಫಲ್ಗಳು, ಸುಧಾರಿತ ಮಾರ್ಟರ್ ಮತ್ತು ಒಂಬತ್ತು ಸುಧಾರಿತ ಮಾರ್ಟರ್ ಬ್ಯಾರೆಲ್ಗಳು, 20 ಜೆಲಾಟಿನ್ ಸ್ಟಿಕ್ಗಳು, 30 ಡಿಟೋನೇಟರ್ಗಳು ಮತ್ತು ಎರಡು ದೇಶೀಯ ನಿರ್ಮಿತ ರಾಕೆಟ್ ಗಳು ಸೇರಿದಂತೆ ಹಲವಾರು ವಸ್ತುಗಳನ್ನು ಕಾಂಗ್ಪೋಪಿ ಜಿಲ್ಲೆಯ ಕಾಂಗ್ಚುಪ್ ಪೊನ್ಲೆನ್ ಪ್ರದೇಶದಿಂದ ಕಾರ್ಯಾಚರಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಕಾಂಗ್ಪೊಕ್ಪಿ ಜಿಲ್ಲೆಯ ಖರಮ್ ವೈಫೇಯ್ನಿಂದ ಡ್ರೋನ್ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಹಲವು ವಸ್ತುಗಳನ್ನು ಕಕ್ಚಿಂಗ್ ಲಾಮ್ಡಾಂಗ್ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿಯನ್ನು ನೀಡಿದ್ದಾರೆ.
ಡ್ರೋನ್ ದಾಳಿಯ ಬಗ್ಗೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಪ್ರತಿಕ್ರಿಯಿಸಿದ್ದು, ಘಟನೆಯನ್ನು ಭಯೋತ್ಪಾದನೆಯ ಕೃತ್ಯ ಕರೆದಿದ್ದಾರೆ. ಇಂತಹ ಹೇಡಿತನದ ಕೃತ್ಯಗಳನ್ನು ಪ್ರಬಲ ಪದಗಳಲ್ಲಿ ಖಂಡಿಸುವುದಾಗಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಣಿಪುರ ಸಿಎಂ, 'ಮಣಿಪುರ ರಾಜ್ಯ ಸರ್ಕಾರವು ಇಂತಹ ಅಪ್ರಚೋದಿತ ದಾಳಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಈ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡಲು ಅಗತ್ಯ ಕ್ರಮ ಕೈಗೊಳ್ಳಲಿದೆʼ ಎಂದು ಹೇಳಿದ್ದಾರೆ.
ನಾವು ಎಲ್ಲಾ ರೀತಿಯ ಹಿಂಸಾಚಾರಗಳನ್ನು ಖಂಡಿಸುತ್ತೇವೆ ಮತ್ತು ಮಣಿಪುರದ ಜನರು ದ್ವೇಷ, ವಿಭಜನೆ ಮತ್ತು ಪ್ರತ್ಯೇಕತಾವಾದದ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದು ಸಿಂಗ್ ಹೇಳಿದ್ದಾರೆ.