ಪ್ರಸ್ತಾವಿತ ಮೂರು ಅಪರಾಧ ಮಸೂದೆಗಳಲ್ಲಿ ಭಾರತೀಯ ಮಣ್ಣಿನ ವಾಸನೆಯಿದೆ: ಅಮಿತ್ ಶಾ
ಅಮಿತ್ ಶಾ| Photo: PTI
ಹೊಸದಿಲ್ಲಿ: ಪ್ರಸ್ತಾವಿತ ಮೂರು ಅಪರಾಧ ಮಸೂದೆಗಳು ಜನಕೇಂದ್ರಿತವಾಗಿದ್ದು, ಭಾರತೀಯ ಮಣ್ಣಿನ ವಾಸನೆಯನ್ನು ಹೊಂದಿವೆ ಹಾಗೂ ಅವುಗಳ ಮುಖ್ಯ ಉದ್ದೇಶ ನಾಗರಿಕರ ಸಾಂವಿಧಾನಿಕ, ಮಾನವ ಹಾಗೂ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವುದಾಗಿದೆ ಎಂದು ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಹೊಸ ದಿಲ್ಲಿಯಲ್ಲಿ ಭಾರತೀಯ ಬಾರ್ ಕೌನ್ಸಿಲ್ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವಕೀಲರ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತಾವಿತ ಮೂರು ಮಸೂದೆಗಳ ಉದ್ದೇಶವು ಕೇವಲ ದಂಡನೆ ನೀಡುವ ಬದಲು ನ್ಯಾಯ ಒದಗಿಸುವುದೂ ಆಗಿದೆ ಎಂದು ಹೇಳಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್-2023), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್-2023) ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ್ (ಬಿಎಸ್ಎ-2023) ಮಸುದೆಗಳಿಗೆ ಎಲ್ಲ ವಕೀಲರು ತಮ್ಮ ಸಲಹೆಗಳನ್ನು ನೀಡಬೇಕು. ಅದರಿಂದ ಎಲ್ಲರಿಗೂ ಲಾಭವಾಗುವಂತಹ ಅತ್ಯುತ್ತಮ ಕಾನೂನನ್ನು ದೇಶವು ಹೊಂದಲು ಸಾಧ್ಯವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಆಗಸ್ಟ್ 11, 2023ರಂದು ಲೋಕಸಭೆಯಲ್ಲಿ ಮಂಡನೆಯಾಗಿರುವ ಮೇಲಿನ ಮೂರು ಮಸೂದೆಗಳು ಕ್ರಮವಾಗಿ ಭಾರತೀಯ ದಂಡ ಸಂಹಿತೆ, 1860, ಅಪರಾಧ ಪ್ರಕ್ರಿಯಾ ಕಾಯ್ದೆ, 1898 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ, 1872 ಬದಲಿಗೆ ಜಾರಿಯಾಗಲಿವೆ.