ಮಿಜೋರಾಂ ವಿಧಾನಸಭೆಗೆ ಮೊದಲ ಬಾರಿಗೆ ಮೂವರು ಮಹಿಳೆಯರು!
Photo: TOI
ಐಜ್ವಾಲ್: ಮೂವರು ಮಹಿಳೆಯರು ಈ ಬಾರಿ ಮಿಜೋರಾಂ ವಿಧಾನಸಭೆ ಪ್ರವೇಶಿಸಿದ್ದು, ಪುಟ್ಟ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬರಿಗಿಂತ ಹೆಚ್ಚು ಮಂದಿ ಮಹಿಳೆಯರು ವಿಧಾನಸಭೆಯ ಮೆಟ್ಟಲು ತುಳಿದಿದ್ದಾರೆ.
ಝೋರಂ ಪೀಪಲ್ಸ್ ಮೂವ್ ಮೆಂಟ್ (ಝೆಡ್ ಪಿಎಂ)ನ ಲಾಲ್ರಿನ್ ಪುಯಿ ಮತ್ತು ಬರೀಲ್ ವನ್ನೀಹಸಂಗಿ ನೂತನ ಶಾಸಕಿಯರಾಗಿದ್ದು, ಎಂಎನ್ಎಫ್ ನ ಪ್ರಾವೊ ಚಕ್ಮಾ ಕೂಡಾ ವಿಧಾನಸಭೆ ಪ್ರವೇಶಿಸಿದ್ದಾರೆ. ಲಾಲ್ರಿನ್ ಪುಯಿ ಅವರು ಲುಂಗ್ಲೀ ಪೂರ್ವ ಕ್ಷೇತ್ರದಿಂದ, ವೆನ್ನೀಹಸಂಗಿ ಐಜ್ವಾಲ್ ದಕ್ಷಿಣ-3 ಹಾಗೂ ಪ್ರಾವೊ ಪಶ್ಚಿಮ ತ್ಯೂಪಿ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.
ಮಿಜೋರಾಂ 1972ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡ ಬಳಿಕ 30 ಸದಸ್ಯರ ವಿಧಾನಸಭೆಗೆ ಮಾಜಿ ಸಿಎಂ ಟಿ.ಸೈಲೊ ಅವರ ಪೀಪಲ್ಸ್ ಕಾನ್ಫರೆನ್ಸ್ ನ ಎಲ್.ತನ್ಮಾವಿ ಮೊಟ್ಟಮೊದಲ ಮಹಿಳಾ ಪ್ರತಿನಿಧಿಯಾಗಿ 1978ರಲ್ಲಿ ಅಯ್ಕೆಯಾಗಿದ್ದರು. 1984ರಲ್ಲಿ ಇದೇ ಪಕ್ಷದ ಥನ್ಸಿಯಾಮಿ ಎರಡನೇ ಮಹಿಳೆಯಾಗಿ ವಿಧಾನಸಭೆ ಪ್ರವೇಶಿಸಿದರೆ, ಎಂಎನ್ಎಫ್ ನ ಲಾಲ್ಹಿಂಪುಲಿ ಮೂರನೆಯವರು. ಇವರು ಸಿಎಂ ಲಾಲ್ಡೆಂಗಾ ಸಂಪುಟದಲ್ಲಿ 1987ರಲ್ಲಿ ಸಚಿವ ಸ್ಥಾನ ಪಡೆದು, ಈ ಸಾಧನೆ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದರು.
2014ರ ಉಪಚುನಾವಣೆಯಲ್ಲಿ ವನ್ಲಾಲಾಂಪೀ ಚೌಂಗ್ತು ಆಯ್ಕೆಯಾಗಿ, ಕಾಂಗ್ರೆಸ್ ನ ಲಾಲ್ ತಾನ್ವಾಲಾ ಸರ್ಕಾರದಲ್ಲಿ ರಾಜ್ಯ ಸಚಿವೆಯೂ ಆಗಿದ್ದರು.