ಚುನಾವಣೆ ಬಾಂಡ್ ಮೂಲಕ ದಾಖಲೆ ರೂ. 1700 ಕೋಟಿ ದೇಣಿಗೆ ಪಡೆದ ಬಿಜೆಪಿ

ಹೊಸದಿಲ್ಲಿ: ಬಿಜೆಪಿಯ ಆದಾಯ ಒಂದು ವರ್ಷದಲ್ಲಿ ಶೇಕಡ 83 ಏರಿಕೆ ಕಂಡು 2023-24ನೇ ಹಣಕಾಸು ವರ್ಷದಲ್ಲಿ 4340.5 ಕೋಟಿ ರೂಪಾಯಿಗೆ ಏರಿದೆ. ಈ ಪೈಕಿ 1685.6 ಕೋಟಿ ರೂಪಾಯಿ ಚುನಾವಣಾ ಬಾಂಡ್ ಗಳ ಮೂಲಕ ಬಂದಿದೆ. 2022-23ನೇ ಹಣಕಾಸು ವರ್ಷದಲ್ಲಿ ಪಕ್ಷದ ಆದಾಯ 2360.8 ಕೋಟಿ ರೂಪಾಯಿಗಳಾಗಿತ್ತು. ಪಕ್ಷ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ನೀಡಿದ ವಾರ್ಷಿಕ ಪರಿಶೋಧಿತ ವರದಿಯಲ್ಲಿ ಈ ಅಂಕಿ ಅಂಶಗಳು ಸೇರಿವೆ. ಚುನಾವಣಾ ಬಾಂಡ್ ಯೋಜನೆ ಜಾರಿಗೆ ಬಂದ ಬಳಿಕ ಪಕ್ಷ ಗಳಿಸಿದ ಗರಿಷ್ಠ ದೇಣಿಗೆ ಇದಾಗಿದೆ.
ಕಾಂಗ್ರೆಸ್ ಪಕ್ಷದ ಆದಾಯ ಶೇಕಡ ಇದೇ ಅವಧಿಯಲ್ಲಿ 170ರಷ್ಟು ಏರಿಕೆ ಕಂಡು 452.4 ಕೋಟಿ ರೂಪಾಯಿಯಿಂದ 1225 ಕೋಟಿಗೆ ಹೆಚ್ಚಿದೆ. ಕಾಂಗ್ರೆಸ್ ಪಕ್ಷ ಬಾಂಡ್ ಮಾರ್ಗದ ಮೂಲಕ ಪಡೆದ ದೇಣಿಗೆ ಕೂಡಾ ಶೇಕಡ 384 ರಷ್ಟು ಹೆಚ್ಚಳ ಕಂಡಿದೆ. 2023ನೇ ಹಣಕಾಸು ವರ್ಷದಲ್ಲಿ ಚುನಾವಣಾ ಬಾಂಡ್ ಮೂಲಕ ಪಕ್ಷ 171 ಕೋಟಿ ರೂಪಾಯಿ ದೇಣಿಗೆ ಪಡೆದಿದ್ದರೆ, ಮರು ವರ್ಷ ಇದು 828.4 ಕೋಟಿಗೆ ಹೆಚ್ಚಿದೆ. ಬಾಂಡ್ ಗಳ ಮೂಲಕ ಗರಿಷ್ಠ ಆದಾಯ ಪಡೆದ ಎರಡನೇ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದೆ.
ಬಿಆರ್ ಎಸ್ ಪಕ್ಷ ಒಟ್ಟು 685.5 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದು, ಕಾಂಗ್ರೆಸ್ ಪಕ್ಷ ಅದನ್ನು ಹಿಂದಿಕ್ಕಿದೆ. ಅಂತೆಯೇ ಟಿಎಂಸಿ 2023-24ರಲ್ಲಿ ಬಾಂಡ್ ಮೂಲಕ 612.4 ಕೋಟಿ ರೂಪಾಯಿ ಸ್ವೀಕರಿಸಿದೆ. ಬಿಜೆಪಿಯ ವೆಚ್ಚ ಕೂಡಾ ಶೇಕಡ 62ರಷ್ಟು ಹೆಚ್ಚಿದ್ದು, 2022-23ರಲ್ಲಿ ಇದ್ದ 1361.7 ಕೋಟಿಯಿಂದ 2211.7 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ 1754 ಕೋಟಿ ರೂಪಾಯಿಗಳನ್ನು ಚುನಾವಣೆ ಮತ್ತು ಸಾಮಾನ್ಯ ಪ್ರಚಾರಕ್ಕೆ ವೆಚ್ಚ ಮಾಡಿದೆ.
ಕಾಂಗ್ರೆಸ್ ಪಕ್ಷದ ವೆಚ್ಚ ಕೂಡಾ ಈ ಅವಧಿಯಲ್ಲಿ ಶೇಕಡ 120ರಷ್ಟು ಏರಿಕೆಯಾಗಿದ್ದು, 467.1 ಕೋಟಿಯಿಂದ 1025.2 ಕೋಟಿಗೆ ಹೆಚ್ಚಿದೆ. ಪಕ್ಷ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ 49.6 ಕೋಟಿ ರೂಪಾಯಿ ವೆಚ್ಚ ಮಾಡಿದೆ.