ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಡೀಪ್ ಫೇಕ್ ಗೆ ಬಿಗಿ ಕಾನೂನು : ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಸಚಿನ್ ತೆಂಡೂಲ್ಕರ್ ಅವರ ಡೀಪ್ ಫೇಕ್ ವೀಡಿಯೊ ಬಳಿಕ ಹೆಚ್ಚಿದ ಕಳವಳ

Photo : File Photo PTI
ಹೊಸ ದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ತಮ್ಮ ಡೀಪ್ ಫೇಕ್ ವೀಡಿಯೊ ಕುರಿತು ಕ್ರಿಕೆಟ್ ದಂತ ಕತೆ ಸಚಿನ್ ತೆಂಡುಲ್ಕರ್ ದನಿ ಎತ್ತುತ್ತಿದ್ದಂತೆಯೆ, ಡೀಪ್ ಫೇಕರ್ ಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಡೀಪ್ ಫೇಕರ್ ಗಳು ಭಾರತೀಯ ಬಳಕೆದಾರರ ಸುರಕ್ಷತೆ ಹಾಗೂ ವಿಶ್ವಾಸಕ್ಕೆ ಮಾರಕವಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶೀಘ್ರವೇ ಬಿಗಿ ನಿಯಮಗಳ ಅಧಿಸೂಚನೆಯನ್ನು ಸರ್ಕಾರ ಹೊರಡಿಸಲಿದ್ದು, ಸಾಮಾಜಿಕ ಮಾಧ್ಯಮಗಳು ಈ ನಿಯಮಗಳನ್ನು ಪಾಲಿಸುವುದನ್ನು ಖಾತ್ರಿ ಪಡಿಸಬೇಕು ಎಂದು ಸೂಚಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ, ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಿರುಚಿದ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದ ಸಚಿನ್ ತೆಂಡುಲ್ಕರ್, ತಂತ್ರಜ್ಞಾನದ ದುರ್ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆ ವೀಡಿಯೊದಲ್ಲಿ ಸಚಿನ್ ತೆಂಡೂಲ್ಕರ್ ಜೂಜಾಟದ ತಂತ್ರಾಂಶವನ್ನು ಪ್ರಚಾರ ಮಾಡುತ್ತಿರುವಂತೆ ತೋರಿಸಲಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಡೀಪ್ ಫೇಕ್ ವೀಡಿಯೊ ಬಗ್ಗೆ ಎಚ್ಚರಿಸಿದ ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. “ಕೃತಕ ಬುದ್ಧಿಮತ್ತೆ ಚಾಲಿತ ಡೀಪ್ ಫೇಕ್ ಗಳು ಹಾಗೂ ತಪ್ಪು ಮಾಹಿತಿಗಳು ಭಾರತೀಯ ಬಳಕೆದಾರರ ಸುರಕ್ಷತೆ ಹಾಗೂ ವಿಶ್ವಾಸಕ್ಕೆ ಮಾರಕವಾಗಿದೆ. ಇವು ಹಾನಿ ಮತ್ತು ಕಾನೂನು ಉಲ್ಲಂಘನೆಯನ್ನು ಪ್ರತಿನಿಧಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳು ಇವನ್ನು ತಡೆಯಬೇಕು ಹಾಗೂ ತೆಗೆದು ಹಾಕಬೇಕು” ಎಂದು ಸೂಚಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇತ್ತೀಚಿನ ಮಾರ್ಗಸೂಚಿಯನ್ನು ಸಾಮಾಜಿಕ ಮಾಧ್ಯಮಗಳು ಸಂಪೂರ್ಣವಾಗಿ ಪಾಲಿಸಬೇಕು ಎಂದು ಚಂದ್ರಶೇಖರ್ ತಾಕೀತು ಮಾಡಿದ್ದಾರೆ.
“ಸಾಮಾಜಿಕ ಮಾಧ್ಯಮಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಪಾಲಿಸುವುದನ್ನು ಖಾತ್ರಿ ಪಡಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬಿಗಿ ನಿಯಮಗಳ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಪಾಲಿಸುವಲ್ಲಿನ ಯಾವುದೇ ವೈಫಲ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಹಾಗೂ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರವು ಸ್ಪಷ್ಟಪಡಿಸಿದೆ.