ಕೇರಳ: ನರಭಕ್ಷಕ ಎಂದು ಘೋಷಿಸಲಾಗಿದ್ದ ಹುಲಿ ವಯನಾಡ್ ನಲ್ಲಿ ಶವವಾಗಿ ಪತ್ತೆ

Photo credit: mediaoneonline.com
ವಯನಾಡ್: ಕಂಡಲ್ಲಿ ಗುಂಡಿಕ್ಕುವ ಆದೇಶಕ್ಕೆ ಗುರಿಯಾಗಿದ್ದ ನರಭಕ್ಷಕ ಹುಲಿಯೊಂದು ಕೇರಳದ ವಯನಾಡ್ ನ ಮನೆಯೊಂದರ ಬಳಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾನತವಾಡಿ ಪ್ರದೇಶದಲ್ಲಿ ಅದು ಪತ್ತೆಯಾದಾಗ, ಅದರ ದೇಹದ ಮೇಲೆ ಕಾದಾಡಿದ ಗುರುತುಗಳಿದ್ದವು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
45 ವರ್ಷದ ಬುಡಕಟ್ಟು ಮಹಿಳೆಯ ಸಾವಿಗೆ ಈ ಹುಲಿಯೇ ಕಾರಣ ಎಂದು ರವಿವಾರ ಘೋಷಿಸಿದ್ದ ಕೇರಳ ಅರಣ್ಯ ಸಚಿವ ಎ.ಕೆ.ಶಶೀಂದ್ರನ್, ಅದನ್ನು ಗುಂಡಿಟ್ಟು ಹತ್ಯೆಗೈಯ್ಯಬೇಕು ಎಂದು ಆದೇಶಿಸಿದ್ದರು.
ಕಳೆದ ಶುಕ್ರವಾರ ಬುಡಕಟ್ಟು ಮಹಿಳೆಯೊಬ್ಬರನ್ನು ಹತ್ಯೆಗೈದು, ಅರಣ್ಯಾಧಿಕಾರಿಯೊಬ್ಬರ ಮೇಲೆ ದಾಳಿ ನಡೆಸಿದ್ದ ಹುಲಿಯೇ ಮೃತಪಟ್ಟಿರುವ ಹೆಣ್ಣು ಹುಲಿ ಎಂದು ಗುರುತಿಸಲಾಗಿದೆ ಎಂದು ರವಿವಾರ ಮಾನತಾವಾಡಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಉತ್ತರ ಕೇರಳದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಕೆ.ಎಸ್. ತಿಳಿಸಿದ್ದಾರೆ. ಅವರು ನರಭಕ್ಷಕ ಹುಲಿಗಾಗಿ ಹುಡುಕಾಟ ನಡೆಸುತ್ತಿದ್ದ ಕ್ಷಿಪ್ರ ಸ್ಪಂದನಾ ತಂಡದ ಭಾಗವೂ ಆಗಿದ್ದರು. ಈ ಪ್ರಾಂತ್ಯದ ಎಲ್ಲ 38 ಕ್ಯಾಮೆರಾಗಳಲ್ಲೂ ಅದೇ ಹುಲಿಯ ದೃಶ್ಯಾವಳಿಗಳಿಗೆ ಎಂದು ಅವರು ಹೇಳಿದ್ದಾರೆ.
ಮಾನತಾವಾಡಿ ಮಹಾನಗರ ಪಾಲಿಕೆ ಪ್ರದೇಶದ ಪಲಕ್ಕವುನಲ್ಲಿ ಸುಮಾರು ಮಧ್ಯರಾತ್ರಿ ಈ ಹೆಣ್ಣು ಹುಲಿ ಪತ್ತೆಯಾಗಿದ್ದು, ಅದರ ಸಮೀಪವೇ ಇರುವ ಪ್ರದೇಶದಲ್ಲಿ ಅದು ಮೃತಪಟ್ಟಿರುವುದನ್ನು ಅದರ ಶೋಧ ಕಾರ್ಯದಲ್ಲಿ ತೊಡಗಿದ್ದ ಅರಣ್ಯ ಇಲಾಖೆಯ ತಂಡಗಳು ಪತ್ತೆ ಹಚ್ಚಿವೆ.
ಹುಲಿಯ ದೇಹದ ಮೇಲೆ ಆಳವಾದ ಹಳೆಯ ಮತ್ತು ಹೊಸ ಗಾಯಗಳೆರಡೂ ಇವೆ ಎಂದು ಶೋಧ ತಂಡದ ಭಾಗವಾಗಿದ್ದ ಮುಖ್ಯ ಪಶು ಶಸ್ತ್ರಚಿಕಿತ್ಸಕ ಡಾ. ಅರುಣ್ ಝಚರಯ್ಯ ತಿಳಿಸಿದ್ದಾರೆ. ಈ ಗಾಯಗಳು ಇತರ ಹುಲಿಗಳೊಂದಿಗೆ ಕಾದಾಟ ನಡೆಸುವಾಗ ಆಗಿರಬಹುದು ಎಂದು ಅವರು ಶಂಕಿಸಿದ್ದಾರೆ.
ಹುಲಿ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ನಂತರ, ಹೆಚ್ಚುತ್ತಿರುವ ವನ್ಯಜೀವಿಗಳ ದಾಳಿಯನ್ನು ಹತೋಟಿಗೆ ತರುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ವಯನಾಡ್ ನ ಮಾನತಾವಾಡಿಯಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು.