ಕಾಶ್ಮೀರಿ ಪಂಡಿತರು ಮನೆಗೆ ಮರಳುವ ಸಮಯ ಬಂದಿದೆ : ಎನ್ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ
Image Source : PTI
ಶ್ರೀನಗರ : ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರ ಕಣಿವೆಗೆ ಕಾಶ್ಮೀರಿ ಪಂಡಿತರ ವಾಪಸಾತಿಗೆ ಕರೆ ನೀಡಿದ್ದಾರೆ.
1980ರ ದಶಕದಲ್ಲಿ ಮತ್ತು 1990ರ ದಶಕದ ಪೂರ್ವಾರ್ಧದಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದ ಉಗ್ರವಾದಿಗಳ ಹಿಂಸಾಚಾರದಿಂದಾಗಿ ಸಾವಿರಾರು ಪಂಡಿತರು ಪ್ರದೇಶವನ್ನು ತೊರೆದಿದ್ದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ‘ಕಣಿವೆಯಿಂದ ತೆರಳಿದ್ದ ನಮ್ಮ ಸೋದರರು ಮತ್ತು ಸೋದರಿಯರು ಮನೆಗೆ ಮರಳುತ್ತಾರೆ ಎಂದು ನಾನು ಆಶಿಸಿದ್ದೇನೆ. ಈಗ ಅದಕ್ಕೆ ಸಮಯವು ಬಂದಿದೆ. ಅವರು ತಮ್ಮ ಮನೆಗಳಿಗೆ ಮರಳಬೇಕು. ನಾವು ಕೇವಲ ಕಾಶ್ಮೀರಿ ಪಂಡಿತರ ಬಗ್ಗೆ ಯೋಚಿಸುವುದಿಲ್ಲ. ಜಮ್ಮುವಿನ ಜನರ ಬಗ್ಗೆಯೂ ನಾವು ಯೋಚಿಸುತ್ತೇವೆ ’ ಎಂದು ಹೇಳಿದರು.
ಎನ್ಸಿ-ಕಾಂಗ್ರೆಸ್ ಮೈತ್ರಿಕೂಟವು 90 ಸದಸ್ಯಬಲದ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಬಹುಮತವನ್ನು ಸಾಧಿಸಿದ್ದು, ಅಬ್ದುಲ್ಲಾರ ಪುತ್ರ ಹಾಗೂ ಎನ್ಸಿ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಹಕ್ಕು ಮಂಡಿಸಿದ್ದಾರೆ.
ಕಾಶ್ಮೀರಿ ಪಂಡಿತರು ಕಣಿವೆಗೆ ಮರಳಲು ಬಯಸಿದರೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗುವುದು ಎಂದು ಹೇಳಿದ ಅಬ್ದುಲ್ಲಾ, ನೂತನ ಸರಕಾರವು ಅವರ ವಾಪಸಾತಿಗೆ ಉಪಕ್ರಮಗಳನ್ನು ಜಾರಿಗೊಳಿಸುತ್ತದೆ ಎಂದರು.
‘ಕಾಶ್ಮೀರಿ ಪಂಡಿತರು ಬಹು ಹಿಂದೆಯೇ ಮರಳಬೇಕಿತ್ತು ಮತ್ತು ತಮ್ಮ ಮನೆಗಳಲ್ಲಿ ವಾಸವಿರಬೇಕಿತ್ತು. ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎನ್ಸಿ ಸರಕಾರ ತಮ್ಮ ಶತ್ರುವಲ್ಲ ಎಂದು ಅವರೂ ಭಾವಿಸಬೇಕು. ನಾವು ಭಾರತೀಯರು ಮತ್ತು ನಾವು ಎಲ್ಲರ ಜೊತೆ ಸಾಗಲು ಬಯಸುತ್ತೇವೆ ’ ಎಂದು ಅಬ್ದುಲ್ಲಾ ತಿಳಿಸಿದರು.