ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ವಿವಾದದ ಬಳಿಕ ಈಗ ಪ್ರಸಾದದಲ್ಲಿ ಕೀಟವಿತ್ತು ಎಂದು ಭಕ್ತನ ಆರೋಪ : ಟಿಟಿಡಿ ನಿರಾಕರಣೆ
PC : businesstoday.in
ಹೊಸದಿಲ್ಲಿ : ತಿರುಪತಿ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪದ ಬಳಕೆಯ ಆರೋಪದಿಂದ ಸೃಷ್ಟಿಯಾಗಿರುವ ಭಾರೀ ವಿವಾದದ ನಡುವೆ ದೇವಸ್ಥಾನದಲ್ಲಿ ನೀಡಲಾಗಿದ್ದ ಅನ್ನ ಪ್ರಸಾದದಲ್ಲಿ ಸಹಸ್ರಪದಿ (ಒಂದು ಜಾತಿ ಕೀಟ) ಪತ್ತೆಯಾಗಿತ್ತು ಎಂದು ಭಕ್ತರೋರ್ವರು ಆರೋಪಿಸಿದ್ದಾರೆ. ಆರೋಪವನ್ನು ತಿರಸ್ಕರಿಸಿರುವ ದೇವಳದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಅದನ್ನು ಸುಳ್ಳು ಮತ್ತು ಆಧಾರರಹಿತ ಎಂದು ಸ್ಪಷ್ಟನೆ ನೀಡಿದೆ.
ಇತ್ತೀಚಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತ,ದೇವಸ್ಥಾನದ ಅನ್ನ ಪ್ರಸಾದದಲ್ಲಿ ನೀಡಲಾಗಿದ್ದ ಮೊಸರನ್ನದಲ್ಲಿ ಸಹಸ್ರಪದಿಯೊಂದು ಬಿದ್ದಿತ್ತು. ಇದನ್ನು ದೇವಳ ಮಂಡಳಿಯ ಗಮನಕ್ಕೆ ತಂದಿದ್ದರೂ ಅದು ತನ್ನ ದೂರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪವನ್ನು ತಿರಸ್ಕರಿಸಿರುವ ಟಿಟಿಡಿ, ಇದು ಸಂಸ್ಥೆಯ ಹೆಸರು ಕೆಡಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಹೇಳಿದೆ. ‘ಮಾಧವ ನಿಲಯಮ್ನಲ್ಲಿಯ ಅನ್ನ ಪ್ರಸಾದದಲ್ಲಿ ಸಹಸ್ರಪದಿ ಇತ್ತು ಎಂಬ ಆರೋಪವನ್ನು ಟಿಟಿಡಿ ತಿರಸ್ಕರಿಸುತ್ತದೆ. ಆರೋಪವು ಸುಳ್ಳು ಮತ್ತು ಆಧಾರರಹಿತವಾಗಿದೆ. ಇದು ಸಂಸ್ಥೆಯ ಹೆಸರು ಕೆಡಿಸುವ ಮತ್ತು ದೇವಸ್ಥಾನದಲ್ಲಿ ಅನ್ನಪ್ರಸಾದ ಸೇವಿಸುವ ಭಕ್ತರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಯಲ್ಲಿ ತಿಳಿಸಿರುವ ಆಡಳಿತ ಮಂಡಳಿಯು, ಸುಳ್ಳು ಸುದ್ದಿಗಳಿಂದ ಪ್ರಭಾವಿತರಾಗದಂತೆ ಭಕ್ತರನ್ನು ಆಗ್ರಹಿಸಿದೆ.
ಟಟಿಡಿಯು ಶ್ರೀವಾರಿ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗಾಗಿ ಬಿಸಿಬಿಸಿ ಅನ್ನಪ್ರಸಾದವನ್ನು ಸಿದ್ಧಪಡಿಸುತ್ತದೆ ಮತ್ತು ಅನ್ನಪ್ರಸಾದದಲ್ಲಿ ಸಹಸ್ರಪದಿ ಬಿದ್ದಿತ್ತು ಎನ್ನುವ ಭಕ್ತನ ಹೇಳಿಕೆ ನಿಜವಲ್ಲ. ಅನ್ನವನ್ನು ಮೊಸರಿನೊಂದಿಗೆ ಬೆರೆಸುವಾಗ ಕೀಟವಿದ್ದರೆ ಕಾಣಿಸದೇ ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.