ತಿರುಪತಿ ಲಡ್ಡು ವಿವಾದ | ಸಿಬಿಐ ತನಿಖೆ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
PC : PTI
ಹೊಸದಿಲ್ಲಿ: ಈ ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದಲ್ಲಿ ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿ ಸಿಬಿಐ ತನಿಖೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಸಾಮಾಜಿಕ ಹೋರಾಟಗಾರ ಹಾಗೂ ‘ಗ್ಲೋಬಲ್ ಪೀಸ್ ಇನಿಷಿಯೇಟಿವ್’ನ ಅಧ್ಯಕ್ಷ ಕೆ.ಎ. ಪಾಲ್ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ಈ ಪ್ರಕರಣ ವಿಚಾರಣೆ ನಡೆಸಿತು.
ನೀವು ಕೋರಿರುವಂತೆ ತಿರುಪತಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನವನ್ನು ನೀಡಲು ಸಾಧ್ಯವಿಲ್ಲ. ಹಾಗೆ ಮಾಡುವುದಾದರೆ ನಾವು ಎಲ್ಲಾ ದೇವಾಸ್ಥಾನ, ಗುರುದ್ವಾರಗಳಿಗೆ ಪ್ರತ್ಯೇಕ ರಾಜ್ಯವನ್ನು ರೂಪಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಮನವಿಯನ್ನು ತಿರಸ್ಕರಿಸಿದರು.
ಲಡ್ಡು ಪ್ರಸಾದದ ಖರೀದಿ ಹಾಗೂ ತಯಾರಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಕುರಿತಂತೆ ಸಿಬಿಐಯಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಪಾಲ್ ತಮ್ಮ ಅರ್ಜಿಯಲ್ಲಿ ಕೋರಿದ್ದರು.