ತಿರುಪತಿ ಲಡ್ಡು ವಿವಾದ | FSSAI ತನಿಖೆಯ ಬಳಿಕ ಸೂಕ್ತ ಕ್ರಮ : ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ | PC : PTI
ಹೊಸದಿಲ್ಲಿ: ತಿರುಪತಿ ಲಡ್ಡು ವಿಚಾರವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿದ್ದು, ವರದಿ ಕೇಳಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಶುಕ್ರವಾರ ಹೇಳಿದ್ದಾರೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಡ್ಡಾ ಹೇಳಿದ್ದಾರೆ.
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ನಾಯ್ಡು ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿಗಳು ಘೋರ ಆರೋಪದಲ್ಲಿ ತೊಡಗಿದ್ದಾರೆ ಎಂದು ವೈಎಸ್ಆರ್ಸಿಪಿ ಪಕ್ಷವು ಆರೋಪಿಸಿರುವುದು ಭಾರೀ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.
ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳ ಆರೋಗ್ಯ ಕ್ಷೇತ್ರದಲ್ಲಿನ ಸಾಧನೆಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, " ಈ ವಿಷಯವು ನನಗೆ ಸಾಮಾಜಿಕ ಮಾಧ್ಯಮದ ಮೂಲಕ ಗಮನಕ್ಕೆ ಬಂದಿದೆ. ನಾನು ಚಂದ್ರಬಾಬು ನಾಯ್ಡು ಅವರೊಂದಿಗೆ ಈ ಕುರಿತು ಮಾತನಾಡಿದ್ದೇನೆ. ಲಭ್ಯವಿರುವ ವರದಿಗಳನ್ನು ಹಂಚಿಕೊಳ್ಳಲು ಹೇಳಿದ್ದೇನೆ. ವರದಿ ಪರಿಶೀಲಿಸಿ ಆ ಬಳಿಕ ನಾನು ಮಾತನಾಡುತ್ತೇನೆ. FSSAI ಅಡಿಯಲ್ಲಿ ಕಾನೂನು ಚೌಕಟ್ಟು ಮತ್ತು ನಿಬಂಧನೆಗಳೊಳಗೆ ವರದಿಯನ್ನು ಪರಿಶೀಲಿಸಲಾಗುತ್ತದೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ”, ಎಂದು ಅವರು ಹೇಳಿದ್ದಾರೆ.