ತಿರುಪತಿ ಕಾಲ್ತುಳಿತ ಪ್ರಕರಣ | ನ್ಯಾಯಾಂಗ ತನಿಖೆ ಘೋಷಿಸಿದ ಸಿಎಂ ಚಂದ್ರಬಾಬು ನಾಯ್ಡು
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು | PC : PTI
ಹೊಸದಿಲ್ಲಿ : ಆರು ಮಂದಿ ಸಾವನ್ನಪ್ಪಲು ಕಾರಣವಾದ ತಿರುಪತಿ ದೇವಾಲಯದ ಕಾಲ್ತುಳಿತದ ಕುರಿತು ನ್ಯಾಯಾಂಗ ತನಿಖೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗುರುವಾರ ಘೋಷಿಸಿದ್ದಾರೆ.
ಸುಗಮ ಕಾರ್ಯಾಚರಣೆಯ ಖಾತರಿ ನೀಡಲು ವಿಫಲವಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಂಡಿದ್ದಾರೆ.
ಕಾಲ್ತುಳಿದ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಹಾಗೂ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಸಂಜೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ತಿರುಪತಿಯಲ್ಲಿ ಮೇಲ್ವಿಚಾರಣೆ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳನ್ನು ನಾನು ನೋಡಿದ್ದೇನೆ ಎಂದರು.
ಸುಗಮ ಕಾರ್ಯಾಚರಣೆಯ ಖಾತರಿ ನೀಡಲು ವಿಫಲವಾದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತಿರುಪತಿ ಎಸ್ಪಿ ಹಾಗೂ ತಿರುಮಲ ತಿರುಪತಿ ದೇವಸ್ಥಾನಂ (ಟಿಡಿಡಿ)ಯ ಜಂಟಿ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಇನ್ನೊಬ್ಬರು ಅಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಲ್ತುಳಿತ ದುರಾದೃಷ್ಟಕರ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಇಂತಹ ದುರಂತಗಳನ್ನು ತಪ್ಪಿಸಲು ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
►ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ
ತಿರುಪತಿ ದೇವಾಲಯದ ವೈಕುಂಠ ಏಕಾದಶಿ ದರ್ಶನದ ಟೋಕನ್ ನೀಡುವ ಕೇಂದ್ರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆಂಧ್ರಪ್ರದೇಶ ಸರಕಾರ 25 ಲಕ್ಷ ರೂ. ಪರಿಹಾರ ಘೋಷಿಸಿದೆ.