ಐದು ನಿಮಿಷ ನಾವೆಲ್ಲ ಸತ್ತು ಹೋಗಿದ್ದೇವೆ ಅನಿಸಿತ್ತು: ತಿರುಪತಿ ಭಯಾನಕ ಕಾಲ್ತುಳಿತದ ಕುರಿತು ಮೆಲುಕು ಹಾಕಿದ ಬದುಕುಳಿದವರು
PC : PTI
ತಿರುಪತಿ: ಬುಧವಾರ ತಿರುಪತಿಯಲ್ಲಿ ನಡೆದ ಭಯಾನಕ ಕಾಲ್ತುಳಿತ ಘಟನೆಯಲ್ಲಿ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದು, ಈ ಘಟನೆಯ ಹೊಣೆಯನ್ನು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯೇ ಹೊರಬೇಕು ಎಂದು ಘಟನೆಯಲ್ಲಿ ಬದುಕುಳಿದವರು ಆಗ್ರಹಿಸಿದ್ದಾರೆ.
ವೈಕುಂಠ ದ್ವಾರ ದರ್ಶನಂಗಾಗಿ ಟಿಕೆಟ್ ಪಡೆಯಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದೆವು ಎಂಬುದರಿಂದ ಹಿಡಿದು, ಟಿಕೆಟ್ ಕೌಂಟರ್ ಗಳ ದ್ವಾರಗಳನ್ನು ದಿಢೀರನೇ ತೆರೆದಿದ್ದರಿಂದ ಕಾಲ್ತುಳಿತ ಘಟನೆ ನಡೆಯಿತು ಎಂಬುವವರೆಗೆ ವಿವಿಧ ಬಗೆಯ ದೂರುಗಳನ್ನು ಭಕ್ತರು ಮಾಡಿದ್ದಾರೆ.
“ಐದು ನಿಮಿಷಗಳ ಕಾಲ ನಾವೆಲ್ಲ ಸತ್ತು ಹೋಗಿದ್ದೇವೆ ಅನ್ನಿಸಿತ್ತು. ನಾನು ಕಳೆದ 25 ವರ್ಷಗಳಿಂದ ದೇವಸ್ಥಾನಕ್ಕೆ ಬರುತ್ತಿದ್ದು, ಈ ಹಿಂದೆಂದೂ ಹೀಗೆ ನಡೆದಿರಲಿಲ್ಲ” ಎಂದು ಬುಧವಾರ ಡಿ.ವೆಂಕಟಲಕ್ಷ್ಮಿ ಎಂಬುವವರು ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಆರು ಬಾಲಕರು ನನ್ನನ್ನು ಪಕ್ಕಕ್ಕೆ ಎಳೆದುಕೊಂಡು, ನನಗೆ ಕುಡಿಯಲು ನೀರು ನೀಡಿದರು ಎಂದೂ ಅವರು ಸ್ಮರಿಸಿದ್ದಾರೆ.
ಲಕ್ಷ್ಮಿಯವರ ಪ್ರಕಾರ, ಅವರು ನಿಂತಿದ್ದ ಸ್ಥಳದ ಬಳಿಗೆ ಜನರು ನುಗ್ಗಿದರು ಹಾಗೂ ಈ ನೂಕುನುಗ್ಗಲಿನಲ್ಲಿ 10 ಜನ ಕೆಳಗೆ ಬಿದ್ದರು ಎಂದು ಹೇಳಲಾಗಿದೆ.
ದುಃಖಿತ ಕುಟುಂಬಗಳ ನೆರವಿಗೆ ಸರಕಾರ ಧಾವಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಜನವರಿ 10ರಿಂದ ಪ್ರಾರಂಭಗೊಳ್ಳಲಿರುವ 10 ದಿನಗಳ ವೈಕುಂಠ ದ್ವಾರ ದರ್ಶನಂಗೆ ದೇಶಾದ್ಯಂತ ಇರುವ ಭಕ್ತಾದಿಗಳು ತಿರುಪತಿಗೆ ಆಗಮಿಸಿದ್ದಾರೆ.