ಈ.ಡಿ.ಮುಂದೆ ವಿಚಾರಣೆಗೆ ಹಾಜರಾದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ
ಪ.ಬಂಗಾಳ ಶಾಲಾ ಉದ್ಯೋಗಗಳ ಹಗರಣ
ಅಭಿಷೇಕ್ ಬ್ಯಾನರ್ಜಿ | Photo: PTI
ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದಲ್ಲಿಯ ಶಾಲಾ ಉದ್ಯೋಗಗಳ ಹಗರಣಕ್ಕೆ ಸಂಬಂಧಿಸಿಂತೆ ವಿಚಾರಣೆಗಾಗಿ ಬುಧವಾರ ಜಾರಿ ನಿರ್ದೇಶನಾಲಯ (ಈ.ಡಿ.)ದ ಮುಂದೆ ಹಾಜರಾದರು.
ಶಾಲಾ ನೇಮಕಾತಿಗಳಲ್ಲಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಒದಗಿಸಲು ಬ್ಯಾನರ್ಜಿಯವರನ್ನು ಕರೆಸಲಾಗಿತ್ತು. ಅಧಿಕಾರಿಗಳು ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನೂ ಅವರಿಗೆ ಕೇಳಿದ್ದಾರೆ ಎಂದು ಈ.ಡಿ.ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ.ಡಿ.ವಿಚಾರಣೆಗೆ ಹಾಜರಾಗಿದ್ದರಿಂದ ಬುಧವಾರ ದಿಲ್ಲಿಯಲ್ಲಿ ನಡೆದ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾನರ್ಜಿಯವರಿಗೆ ಸಾಧ್ಯವಾಗಲಿಲ್ಲ.
ಮಂಗಳವಾರ ಕಲ್ಕತ್ತಾ ಉಚ್ಚ ನ್ಯಾಯಾಲಯಕ್ಕೆ ಪೂರಕ ಅಫಿಡವಿಟ್ ಸಲ್ಲಿಸಿದ್ದ ಬ್ಯಾನರ್ಜಿ,ಈ.ಡಿ.ಯ ಹಿಂದಿನ ಸಮನ್ಸ್ ಗಳನ್ನು ಪ್ರಶ್ನಿಸಿ ತನ್ನ ಪರಿಷ್ಕರಣೆ ಅರ್ಜಿಯ ಬಾಕಿಯುಳಿದಿರುವಾಗ ಅದು ತನಗೆ ಹೊಸದಾಗಿ ಸಮನ್ಸ್ ನೀಡಿರುವುದು ‘ಕಾನೂನಿನಲ್ಲಿ ಕೆಟ್ಟ ಕ್ರಮವಾಗಿದೆ ’ ಎಂದು ಪ್ರತಿಪಾದಿಸಿದ್ದರು.
ಈ.ಡಿ.ತನಿಖೆಯ ನೆಪದಲ್ಲಿ ತನ್ನನ್ನು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಎಳೆದು ತರಲು ಪ್ರಯತ್ನಿಸುತ್ತಿದೆ ಎಂದೂ ಅವರು ಪೂರಕ ಅಫಿಡವಿಟ್ನಲ್ಲಿ ಆರೋಪಿಸಿದ್ದರು.