ಕಾಂಗ್ರೆಸ್ ಬಗ್ಗೆ ‘ಮುಕ್ತ ಮನಸ್ಸು’ಹೊಂದಿದ್ದೇನೆ, ಆದರೆ ಅಗತ್ಯವಾದರೆ ಪಶ್ಚಿಮ ಬಂಗಾಳದಲ್ಲಿ ಏಕಾಂಗಿ ಸ್ಪರ್ಧೆಗೆ ಸಿದ್ಧ: ಟಿಎಂಸಿ
ಮಮತಾ ಬ್ಯಾನರ್ಜಿ | Photo : PTI
ಕೋಲ್ಕತಾ: ಲೋಕಸಭಾ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ತಾನು ಕಾಂಗ್ರೆಸ್ ಬಗ್ಗೆ ‘ಮುಕ್ತ ಮನಸ್ಸು’ ಹೊಂದಿದ್ದೇನೆ, ಆದರೆ ಮಾತುಕತೆಗಳು ವಿಫಲಗೊಂಡರೆ ರಾಜ್ಯದಲ್ಲಿ ಏಕಾಂಗಿ ಸ್ಪರ್ಧೆಗೂ ಸಿದ್ಧವಾಗಿದ್ದೇನೆ ಎಂದು ಟಿಎಂಸಿ ಹೇಳಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಟಿಎಂಸಿ ನಾಯಕ ಸುದೀಪ ಬಂದೋಪಾಧ್ಯಾಯ ಅವರು,‘ನಾವು ಕಾಂಗ್ರೆಸ್ ಬಗ್ಗೆ ಮುಕ್ತ ಮನಸ್ಸು ಹೊಂದಿದ್ದೇವೆ ಎಂದು ನಮ್ಮ ನಾಯಕಿ ಮಮತಾ ಬ್ಯಾನರ್ಜಿಯವರು ಈಗಾಗಲೇ ಹೇಳಿದ್ದಾರೆ. ಈಗ ಅವರೇನು ಮಾಡುತ್ತಾರೆ ಎನ್ನುವುದು ಅವರಿಗೇ ಬಿಟ್ಟ ವಿಷಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಆಗಬೇಕೇ ಎನ್ನುವುದರ ಬಗ್ಗೆ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿಯವರು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿರುವುದರಿಂದ ಸ್ಥಾನ ಹಂಚಿಕೆ ಬಗ್ಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಏನು ಯೋಚಿಸುತ್ತಿದ್ದಾರೆ ಎನ್ನುವುದು ಅಪ್ರಸ್ತುತವಾಗಿದೆ’ ಎಂದು ಹೇಳಿದರು.
ತನ್ನ ಪಕ್ಷವು ಟಿಎಂಸಿಯಿಂದ ಸ್ಥಾನ ಭಿಕ್ಷೆಯನ್ನು ಕೇಳುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿಯವರು ಹೇಳಿದ ಎರಡು ದಿನಗಳ ಬಳಿಕ ಬಂದೋಪಾಧ್ಯಾಯರ ಹೇಳಿಕೆ ಹೊರಬಿದ್ದಿದೆ.
ತನಗೆ ಈ ವಿಷಯದಲ್ಲಿ ಮಾತನಾಡಲು ಅಧಿಕಾರವಿಲ್ಲ. ಹೀಗಾಗಿ ತನ್ನ ಹೆಸರನ್ನು ಉಲ್ಲೇಖಿಸಬಾರದು ಎಂಬ ಷರತ್ತಿನೊಂದಿಗೆ ಇನ್ನೋರ್ವ ಹಿರಿಯ ಟಿಎಂಸಿ ನಾಯಕರು, ಪಶ್ಚಿಮ ಬಂಗಾಳದಲ್ಲಿ ಮೈತ್ರಿಯನ್ನು ಮಾಡಿಕೊಳ್ಳಲು ಪಕ್ಷವು ಮುಕ್ತವಾಗಿದೆ,ಆದರೆ ಅಗತ್ಯವಾದರೆ ಏಕಾಂಗಿಯಾಗಿ ಸ್ಪರ್ಧಿಸಲೂ ಸಿದ್ಧವಿದೆ ಎಂದು ಹೇಳಿದರು.
ರಾಜ್ಯದಲ್ಲಿಯ 42 ಲೋಕಸಭಾ ಸ್ಥಾನಗಳ ಪೈಕಿ ನಾಲ್ಕನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲು ಟಿಎಂಸಿ ಪರಿಶೀಲಿಸುತ್ತಿದೆ ಎಂದು ಬೆಳವಣಿಗೆಗಳನ್ನು ಬಲ್ಲ ಹಲವು ನಾಯಕರು ದೃಢಪಡಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22 ಸ್ಥಾನಗಳನ್ನು ಟಿಎಂಸಿ, ಎರಡು ಸ್ಥಾನಗಳನ್ನು ಕಾಂಗ್ರೆಸ್ ಮತ್ತು 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದವು.