ನಾಳೆ (ಎ.26) ಎರಡನೇ ಹಂತದ ಲೋಕಸಭಾ ಚುನಾವಣೆ
ರಾಹುಲ್ ಗಾಂಧಿ, ಶಶಿ ತರೂರ್ ಕಣದಲ್ಲಿ |ಹ್ಯಾಟ್ರಿಕ್ ಗೆಲುವಿಗೆ ಕಾತುರರಾಗಿರುವ ಹೇಮಾಮಾಲಿನಿ, ಓಂ ಬಿರ್ಲಾ
ಹೊಸದಿಲ್ಲಿ : ಶುಕ್ರವಾರ ಎರಡನೇ ಹಂತದ ಲೋಕಸಭಾ ಚುನಾವಣೆಗೆ ರಂಗ ಸಜ್ಜುಗೊಂಡಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಹಾಗೂ ನಟ-ರಾಜಕಾರಣಿ ಅರುಣ ಗೋವಿಲ್ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಬಿಜೆಪಿಯ ಹೇಮಾಮಾಲಿನಿ, ಓಂ ಬಿರ್ಲಾ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಕ್ಷೇತ್ರಗಳಲ್ಲಿ ಹ್ಯಾಟ್ರಿಕ್ ಗೆಲುವಿಗೆ ಕಾತುರರಾಗಿದ್ದಾರೆ.
ಏಳು ಹಂತಗಳ ಲೋಕಸಭಾ ಚುನಾವಣೆಗಳ ಮೊದಲ ಹಂತದ ಮತದಾನ ಎ.19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿತ್ತು. ಚುನಾವಣಾ ಆಯೋಗದ ಪ್ರಕಟಣೆಯಂತೆ ಸರಾಸರಿ ಸುಮಾರು ಶೇ.65ರಷ್ಟು ಮತದಾನವಾಗಿತ್ತು.
ಶುಕ್ರವಾರ ಎರಡನೇ ಹಂತದ ಚುನಾವಣೆಯಲ್ಲಿ ಕೇರಳದ ಎಲ್ಲ 20, ಕರ್ನಾಟಕದ 28 ಪೈಕಿ 14, ಅಸ್ಸಾಂ ಮತ್ತು ಬಿಹಾರಗಳ ತಲಾ ಐದು, ಮಧ್ಯಪ್ರದೇಶದ ಏಳು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಎಂಟು,ರಾಜಸ್ಥಾನದ ಹದಿಮೂರು, ಛತ್ತೀಸ್ ಗಡ ಮತ್ತು ಪಶ್ಚಿಮ ಬಂಗಾಳದ ತಲಾ ಮೂರು, ಜಮ್ಮು-ಕಾಶ್ಮೀರ, ಮಣಿಪುರ ಮತ್ತು ತ್ರಿಪುರಾಗಳ ತಲಾ ಒಂದು ಲೋಕಸಭಾ ಕ್ಷೇತ್ರ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಕೇರಳದ ವಯನಾಡಿನಿಂದ ಹಾಲಿ ಸಂಸದ ರಾಹುಲ್ ಗಾಂಧಿಯವರು ಪುನರಾಯ್ಕೆಯನ್ನು ಬಯಸಿದ್ದು, ಸಿಪಿಐನ ಆ್ಯನ್ನೀ ರಾಜಾ ಮತ್ತು ಬಿಜೆಪಿಯ ಕೆ.ಸುರೇಂದ್ರನ್ ಕಣದಲ್ಲಿದ್ದಾರೆ. ತರೂರ್ ತಿರುವನಂತಪುರ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಆಯ್ಕೆಯನ್ನು ಬಯಸಿದ್ದು, ಅವರೆದುರು ಬಿಜೆಪಿಯ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐನ ಪಾಣ್ಯನ್ ರವೀಂದ್ರನ್ ಸೆಣಸುತ್ತಿದ್ದಾರೆ.
2014ರಿಂದ ಮಥುರಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿಯ ಹೇಮಾಮಾಲಿನಿ ಕಾಂಗ್ರೆಸ್ನ ಮುಕೇಶ ಡಂಗಾರ್ ವಿರುದ್ಧ ಸ್ಪರ್ಧಿಸಿದ್ದರೆ, ಕೋಟಾದ ಎರಡು ಬಾರಿಯ ಸಂಸದ ಓಂ ಬಿರ್ಲಾ ಅವರು ಕಾಂಗ್ರೆಸ್ ನ ಪ್ರಹ್ಲಾದ ಗುಂಜಾಲ್ ಅವರನ್ನು ಎದುರಿಸುತ್ತಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೂರನೇ ಬಾರಿಗೆ ಆಯ್ಕೆಯನ್ನು ಬಯಸಿ ಜೋಧಪುರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಕಾಂಗ್ರೆಸ್ ನ ಕರಣಸಿಂಗ್ ಉಚಿಯಾರ್ದಾ ಅವರ ಎದುರಾಳಿಯಾಗಿದ್ದಾರೆ.
ಛತ್ತೀಸ್ ಗಡದ ಮಾಜಿ ಮುಖ್ಯಮಂತ್ರಿಹಾಗೂ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ರಾಜನಂದಗಾಂವ್ ನಲ್ಲಿ ಹಾಲಿ ಸಂಸದ ಬಿಜೆಪಿಯ ಸಂತೋಷ ಪಾಂಡೆ ಎದುರು ಸ್ಪರ್ಧಿಸಿದ್ದಾರೆ.
ರಾಮಾಯಣ ಟಿವಿ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರವನ್ನು ಅಭಿಯಿಸುವ ಮೂಲಕ ಪ್ರಸಿದ್ಧರಾಗಿದ್ದ ಅರುಣ ಗೋವಿಲ್ ಮೀರತ್ ಕ್ಷೇತ್ರದಲ್ಲಿ ಮೂರು ಬಾರಿಯ ಸಂಸದ ರಾಜೇಂದ್ರ ಅಗರವಾಲ್ ಬದಲಿಗೆ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಅವರು ಬಿಎಸ್ಪಿಯ ದೇವವೃತ ಕುಮಾರ ತ್ಯಾಗಿ ಮತ್ತು ಎಸ್ಪಿಯ ಸುನೀತಾ ವರ್ಮಾರನ್ನು ಎದುರಿಸುತ್ತಿದ್ದಾರೆ.
ಮಧ್ಯಪ್ರದೇಶ ತಿಕಮ್ ಗಡದಲ್ಲಿ ಬಿಜೆಪಿಯ ವಿರೇಂದ್ರ ಕುಮಾರ ಅವರು ನಾಲ್ಕನೇ ಬಾರಿಗೆ ಆಯ್ಕೆಯನ್ನು ಬಯಸಿ ಕಣಕ್ಕಿಳಿದಿದ್ದಾರೆ.
ಕೇರಳದ ಅಲಪ್ಪುಳ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ಕ್ಷೇತ್ರದ ಮೂಲಕ 2014ರ ಬಳಿಕ ಮತ್ತೊಮ್ಮೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಲಪ್ಪುಳವನ್ನು ಹೊರತು ಪಡಿಸಿ ಕೇರಳದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಅಲಪ್ಪುಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಗೆದ್ದಿತ್ತು.
ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಬಿಜೆಪಿ ಟಿಕೆಟ್ ನಲ್ಲಿ ತ್ರಿಶೂರಿನಿಂದ ಕಣಕ್ಕಿಳಿದಿದ್ದಾರೆ.