ಮುಂದಿನ ಕ್ರಮಗಳನ್ನು ನಿರ್ಧರಿಸಲು ನಾಳೆ (ಜೂ. 5) ಇಂಡಿಯಾ ಮೈತ್ರಿಕೂಟದ ಸಭೆ
PC : PTI
ಮುಂಬೈ: ಮುಂದಿನ ಕ್ರಮಗಳನ್ನು ನಿರ್ಧರಿಸಲು ‘ಇಂಡಿಯಾ’ ಮೈತ್ರಿಕೂಟದ ನಾಯಕರು ಹೊಸದಿಲ್ಲಿಯಲ್ಲಿ ಬುಧವಾರ ಸಭೆ ಸೇರಲಿದ್ದಾರೆ ಎಂದು ಎನ್ಸಿಪಿ (ಎಸ್ಪಿ)ಯ ವರಿಷ್ಠ ಶರದ್ ಪವಾರ್ ಅವರು ಮಂಗಳವಾರ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ಟ್ರೆಂಡ್ಗಳೂ ಸೂಚಿಸುತ್ತಿರುವುದರಿಂದ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪವಾರ್, ತಾನು ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅಥವಾ ಟಿಡಿಪಿ ನಾಯಕ ಚಂದ್ರಬಾಬು ನಾಯ್ದು ಅವರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಮಾಧ್ಯಮ ವರದಿಗೆ ವ್ಯತಿರಿಕ್ತವಾಗಿ ಹೇಳಿದ್ದಾರೆ.
‘‘ನಾನು ಮಲ್ಲಿಕಾರ್ಜುನ ಖರ್ಗೆ ಹಾಗೂ ಸೀತಾರಾಮ ಯೆಚೂರಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನಾಳೆ ದಿಲ್ಲಿಯಲ್ಲಿ ಇಂಡಿಯಾ ಮೈತ್ರಿಕೂಟದ ಸಭೆ ನಡೆಯುವ ಸಾಧ್ಯತೆ ಇದೆ’’ ಎಂದು ಪವಾರ್ ಅವರು ಹೇಳಿದ್ದಾರೆ.
ಮುಂದಿನ ಪ್ರಧಾನಿ ಯಾರಾಗಬಹುದು ? ಎಂಬ ಪ್ರಶ್ನೆಗೆ ಪವಾರ್ ಅವರು, ‘‘ನಾವು ಈ ಬಗ್ಗೆ ಚಿಂತಿಸಿಲ್ಲ’’ ಎಂದಿದ್ದಾರೆ.
‘‘ಇಂಡಿಯಾ ಮೈತ್ರಿಕೂಟ ಸರಕಾರ ರಚಿಸಲು ಸಾಧ್ಯವಾಗಲಿದೆ ಎಂದು ನಾನು ಖಚಿತವಾಗಿ ಹೇಳಲಾರೆ. ನಾವು ನಾಳೆ ಸಭೆ ಸೇರಲಿದ್ದೇವೆ. ಮುಂದಿನ ಕ್ರಮಗಳ ಕುರಿತು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಿದ್ದೇವೆ’’ ಎಂದು ಶರದ್ ಪವಾರ್ ಅವರು ತಿಳಿಸಿದ್ದಾರೆ.