ನಾಳೆ(ಮೇ 12) ನಾಲ್ಕನೇ ಹಂತದ ಲೋಕಸಭಾ ಚುನಾವಣೆ | 96 ಕ್ಷೇತ್ರಗಳಲ್ಲಿ ಮತದಾನ ; ಕಣದಲ್ಲಿ 1717 ಅಭ್ಯರ್ಥಿಗಳು
PC : PTI
ಹೊಸದಿಲ್ಲಿ : ಲೋಕಸಭಾ ಚುನಾವಣೆಯ ನಾಲ್ಕನೆ ಹಂತದ ಮತದಾನವು ಸೋಮವಾರ ನಡೆಯಲಿದೆ. 9 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, 1717 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಲಿದೆ. ಆಂಧ್ರಪ್ರದೇಶದ 25, ತೆಲಂಗಾಣದ 17, ಉತ್ತರಪ್ರದೇಶದ 13, ಮಹಾರಾಷ್ಟ್ರದ 11 ಮಧ್ಯಪ್ರದೇಶ ಹಾಗೂ ಪಶ್ಚಿಮಬಂಗಾಳದ ತಲಾ ನಾಲ್ಕು ಕ್ಷೇತ್ರಗಳು, ಬಿಹಾರದ 5 ಸ್ಥಾನಗಳು, ಜಾರ್ಖಂಡ್ ಹಾಗೂ ಒಡಿಶಾದ ತಲಾ ಮತ್ತು ಜಮ್ಮುಕಾಶ್ಮೀರದ ಒಂದು ಕ್ಷೇತ್ರದಲ್ಲಿ ಮತದಾನವಾಗಲಿದೆ. ಮತದಾನವು ಬೆಳಗ್ಗೆ 7:00 ಗಂಟೆಗೆ ಆರಂಭಗೊಳ್ಳಲಿದ್ದು ಸಂಜೆ 6:00 ಗಂಟೆಗೆ ಮುಕ್ತಾಯಗೊಳ್ಳಲಿದೆ.
ಮೂರು ಹಂತಗಳಲ್ಲಿ ಈವರೆಗೆ ಒಟ್ಟು 285 ಕ್ಷೇತ್ರಳಿಗೆ ಮತದಾನವಾಗಿದೆ. ಚುನಾವಣಾ ಆಯೋಗವು ಶನಿವಾರ ಅಧಿಕೃತ ಅಧಿಸೂಚನೆಯೊಂದನ್ನು ಹೊರಡಿಸಿ ಲೋಕಸಭಾ ಚುನಾವಣೆ ಮೂರನೇ ಹಂತದಲ್ಲಿ 65.68 ಶೇ. ಮತದಾನವಾಗಿರುವುದಾಗಿ ಹೇಳಿದೆ.
ಇದರ ಜೊತೆಗೆ ಆಂಧ್ರಪ್ರದೇಶದ ಎಲ್ಲಾ 25 ಲೋಕಸಭಾ ಕ್ಷೇತ್ರಗಳ ಜೊತೆಗೆ 175 ವಿಧಾನಸಭಾ ಕ್ಷೇತ್ರಗಳಿಗೂ ನಾಳೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತೆಲಂಗಾಣದ ಎಲ್ಲಾ 17 ಲೋಕಸಭಾ ಕ್ಷೇತ್ರಗಳಿಗೂ ನಾಳೆ ಒಂದೇ ಹಂತದ ಮತದಾನ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು
ಅಸಾದುದ್ದೀನ್ ಉವೈಸಿ (ಎಐಎಂಐಎಂ) - ಹೈದರಾಬಾದ್, ಅಖಿಲೇಶ್ ಯಾದವ್ (ಎಸ್ಪಿ) -ಕನೌಜ್,ಮಹುವಾ ಮೊಯಿತ್ರಾ(ಟಿಎಂಸಿ)- ಕೃಷ್ಣನಗರ, ವೈ.ಎಸ್.ಶರ್ಮಿಳಾ ರೆಡ್ಡಿ (ಕಾಂಗ್ರೆಸ್) -ಕಡಪ, ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್), ಯೂಸುಫ್ ಪಠಾಣ್ (ಟಿಎಂಸಿ) - ಬೆಹ್ರಾಂಪುರ, ಶತ್ರುಘ್ನಸಿನ್ಹಾ (ಟಿಎಂಸಿ)-ಅಸಾನ್ಸೊಲ್.
ಹೈದರಾಬಾದ್ನಲ್ಲಿ ಎಐಎಂಐಎಂ ಪಕ್ಷದ ವರಿಷ್ಠ ಅಸಾದುದ್ದೀನ್ ಉವೈಸಿ ವಿರುದ್ಧ ಬಿಜೆಪಿಯು ಶಾಸ್ತ್ರೀಯ ನೃತ್ಯಕಲಾವಿದೆ ಮಾಧವಿ ಲತಾ ಅವರನ್ನು ಕಾಣಕ್ಕಿಳಿಸಿದೆ.
ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಟಿಎಂಸಿಯ ಮಹುವಾ ಮೊಯಿತ್ರಾ ಅವರು ಬಿಜೆಪಿ ಅಭ್ಯರ್ಥಿ ರಾಜವಂಶಸ್ಥೆ ಅಮೃತಾರಾಯ್ ಅವರನ್ನು ಎದುರಿಸುತ್ತಿದ್ದಾರೆ. ಜಮ್ಮುಕಾಶ್ಮೀರದ ಶ್ರೀ ನಗರ ಕ್ಷೇತ್ರವು ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳು ಕ್ರಮವಾಗಿ ಅಗಾ ಸಯ್ಯದ್ ರುಹುಲ್ಲಾ ಮೆಹ್ದಾ ಹಾಗೂ ವಾಹೀದ್ ಪಾರಾ ಅವರನ್ನು ತಮ್ಮ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ. ಜಮ್ಮುಕಾಶ್ಮೀರ ಅಪ್ನಿ ಪಕ್ಷದ ಮೊಹಮ್ಮದ್ ಅಶ್ರಫ್ ಮಿರ್ ಅವರು ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.