ತೆಲಂಗಾಣ | ಬಿಆರ್ಎಎಸ್ ಪಕ್ಷದ ಹಿರಿಯ ನಾಯಕರಾದ ಕೆ ಟಿ ರಾಮರಾವ್, ಟಿ ಹರೀಶ್ ರಾವ್ ಗೆ ಗೃಹಬಂಧನ!
ಕೆ ಟಿ ರಾಮರಾವ್ (PTI)
ತೆಲಂಗಾಣ: ಬಿಆರ್ ಎಸ್ ಪಕ್ಷದ ಕಾರ್ಯಧ್ಯಕ್ಷರಾದ ಕೆ ಟಿ ರಾಮರಾವ್, ಟಿ ಹರೀಶ್ ರಾವ್ ಸೇರಿದಂತೆ ಭಾರತ್ ರಾಷ್ಟ್ರ ಸಮಿತಿಯ(ಬಿ ಆರ್ ಎಸ್) ಪಕ್ಷದ ಉನ್ನತ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಬಿಆರ್ ಎಸ್ ಮೂಲಗಳನ್ನು ಉಲ್ಲೇಖಿಸಿ PTI ವರದಿ ಮಾಡಿದೆ.
ಹೈದರಾಬಾದ್ ನ ಗಚಿಬೌಲಿ ನಿವಾಸದಲ್ಲಿ ಕೆ ಟಿ ರಾಮರಾವ್ ಅವರನ್ನು ಮತ್ತು ಕೊಕಾಪೇಟೆಯ ನಿವಾಸದಲ್ಲಿ ಹರೀಶ್ ರಾವ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಮುಖಂಡ, ಜಗ್ತಿಯಾಲ್ ಶಾಸಕ ಸಂಜಯ್ ಕುಮಾರ್ ಗೆ ನಿಂದನೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಜೂರಾಬಾದ್ ನ ಬಿಆರ್ ಎಸ್ ಶಾಸಕ ಕೌಶಿಕ್ ರೆಡ್ಡಿ ಅವರನ್ನು ಸೋಮವಾರ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ವರದಿಗಳ ಪ್ರಕಾರ, ಸಂಜಯ್ ಕುಮಾರ್ ಅವರ ಆಪ್ತ ಸಹಾಯಕ ದಾಖಲಿಸಿದ ದೂರು ಸೇರಿದಂತೆ ಈ ಬಗ್ಗೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿದೆ. ಕರೀಂನಗರದ ಸ್ಥಳೀಯ ನ್ಯಾಯಾಲಯ ಮಂಗಳವಾರ ಕೌಶಿಕ್ ರೆಡ್ಡಿಗೆ ಜಾಮೀನು ಮಂಜೂರು ಮಾಡಿದೆ. ಸೋಮವಾರ ಸಂಜೆ ಜುಬಿಲಿ ಹಿಲ್ಸ್ ನಲ್ಲಿ ಅವರನ್ನು ಬಂಧಿಸಲಾಗಿತ್ತು.
ಬಿಆರ್ ಎಸ್ ನಾಯಕರು ಕೌಶಿಕ್ ರೆಡ್ಡಿ ಬಂಧನವನ್ನು ಖಂಡಿಸಿದ್ದಾರೆ ಮತ್ತು ಈ ಕ್ರಮವನ್ನು ರಾಜಕೀಯ ಪ್ರೇರಿತ ಮತ್ತು ಪಕ್ಷದ ನಾಯಕರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಹೇಳಿದ್ದರು. ಕೌಶಿಕ್ ರೆಡ್ಡಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದ ಕೆಟಿಆರ್, ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಕರಣಗಳನ್ನು ದಾಖಲಿಸುವುದು ಮತ್ತು ಬಿಆರ್ ಎಸ್ ನಾಯಕರನ್ನು ಬಂಧಿಸುವುದು ಸಾಮಾನ್ಯವಾಗಿದೆ. ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ರೇವಂತ್ ರೆಡ್ಡಿ ಒಂದು ವರ್ಷದ ಆಡಳಿತದ ಬಗ್ಗೆ ಜನರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಇಂತಹ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದರು.