2016ರಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂಬ ತಮಿಳುನಾಡು ಪೊಲೀಸರ ಆರೋಪವನ್ನು ಅಲ್ಲಗಳೆದ ಇಶಾ ಫೌಂಡೇಶನ್
ಇಶಾ ಫೌಂಡೇಶನ್ | Photo: livemint.com
ಚೆನ್ನೈ : 2016ರಿಂದ ಇಲ್ಲಿಯವರೆಗೆ ಇಶಾ ಫೌಂಡೇಶನ್ ನಿಂದ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಗುರುವಾರ ತಮಿಳುನಾಡು ಪೊಲೀಸರು ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದ್ದರು. ಈ ನಾಪತ್ತೆ ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದೂ ತಿಳಿಸಿದ್ದರು. ಆದರೆ, ತಮಿಳುನಾಡು ಪೊಲೀಸರ ಆರೋಪವನ್ನು ಅಲ್ಲಗಳೆದಿರುವ ಇಶಾ ಫೌಂಡೇಶನ್, “2016ರಿಂದ ಇಲ್ಲಿಯವರೆಗೆ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಹೊಸ ಆರೋಪವು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತವಾಗಿದ್ದು, ಈ ಆರೋಪವನ್ನು ಇಶಾ ಫೌಂಡೇಶನ್ ತಳ್ಳಿ ಹಾಕುತ್ತದೆ” ಎಂದು ತನ್ನ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.
ನ್ಯಾ. ಎಂ.ಎಸ್.ರಮೇಶ್ ಹಾಗೂ ನ್ಯಾ. ಸುಂದರ್ ಮೋಹನ್ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ನ್ಯಾಯಪೀಠದೆದುರು ತಮಿಳುನಾಡು ಪೊಲೀಸರು ಮೇಲಿನಂತೆ ಪ್ರತಿಪಾದಿಸಿದ್ದರು. ತಿರುನಲ್ವೇಲಿ ಜಿಲ್ಲೆಯ ತಿರುಮಲೈ ಎಂಬುವವರು ತಮ್ಮ ಸಹೋದರ ಗಣೇಶನ್ ಅವರನ್ನು ಖುದ್ದಾಗಿ ಹಾಜರುಪಡಿಸಬೇಕು ಎಂದು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ಈ ನ್ಯಾಯಪೀಠವು ನಡೆಸುತ್ತಿದೆ.
ಪ್ರಗತಿಯಲ್ಲಿರುವ ತನಿಖೆಯ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್, ಈ ಪ್ರಕರಣದ ಕುರಿತು ತಮಿಳುನಾಡು ಪೊಲೀಸರು ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ನಾಪತ್ತೆಯಾಗಿರುವ ಕೆಲವರು ಅದಾಗಲೇ ವಾಪಸು ಮರಳಿರುವ ಸಾಧ್ಯತೆ ಇದೆ. ಆದರೆ, ನಿರ್ದಿಷ್ಟ ವಿವರಗಳು ಈಗಲೂ ತಪ್ಪಿಸಿಕೊಂಡಿವೆ ಎಂದು ತಿಳಿಸಿದ್ದರು.
ತನಿಖೆಯ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಸೂಚಿಸಿದ ನ್ಯಾಯಪೀಠವು, ವಿಚಾರಣೆಯನ್ನು ಎಪ್ರಿಲ್ 8ಕ್ಕೆ ಮುಂದೂಡಿತ್ತು.
ಮಾರ್ಚ್ 2023ರಿಂದ ನಾಪತ್ತೆಯಾಗಿರುವ ತನ್ನ ಸಹೋದರ ಗಣೇಶನ್ ಅವರನ್ನು ಪತ್ತೆ ಹಚ್ಚಲು ಕಾನೂನಿನ ಮಧ್ಯಪ್ರವೇಶ ಕೋರಿ ರೈತರಾದ ತಿರುಮಲೈ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಶಾ ಯೋಗ ಕೇಂದ್ರದಲ್ಲಿ ತನ್ನ ಸಹೋದರ ಗಣೇಶನ್ ಸೇವಾ ಕಾರ್ಯದಲ್ಲಿ ನಿರತನಾಗಿದ್ದರು ಎಂದು ಅವರು ಈ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು.