ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; ಮೂವರು ಸಹೋದರರು ಸೇರಿದಂತೆ ಐವರು ಕಾರ್ಮಿಕರು ಮೃತ್ಯು
Photo: twitter \ @ians_india
ಮೊರೇನಾ: ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಬುಧವಾರ ಸೋರಿಕೆಯಾದ ಸಂದೇಹಾಸ್ಪದ ವಿಷಾನಿಲ ಸೇವಿಸಿ ಮೂವರು ಸಹೋದರರು ಸೇರಿದಂತೆ ಐವರು ಕಾರ್ಮಿಕರು ಮೃತಟ್ಟಿದ್ದಾರೆ ಎಂದು ಸರಕಾರಿ ಅಧಿಕಾರಿ ತಿಳಿಸಿದ್ದಾರೆ. ಈ ಘಟನೆ ಜಿಲ್ಲೆಯ ಧನೇಲಾ ಪ್ರದೇಶದ ಸಾಕ್ಷಿ ಆಹಾರ ಉತ್ಪಾದನಾ ಕಾರ್ಖಾನೆಯಲ್ಲಿ ಸಂಭವಿಸಿದೆ.
ಈ ಕಾರ್ಖಾನೆಯಲ್ಲಿ ಚೆರ್ರಿ ಹಾಗೂ ಸಕ್ಕರೆ ಮುಕ್ತ ರಾಸಾಯನಿಕಗಳನ್ನು ಬಳಸಿ ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಕಾರ್ಖಾನೆಯಲ್ಲಿರುವ ಟ್ಯಾಂಕ್ನಿಂದ ಪೂರ್ವಾಹ್ನ 11 ಗಂಟೆಗೆ ಅನಿಲ ಸೋರಿಕೆಯಾಗಲು ಆರಂಭವಾಯಿತು. ಇದನ್ನು ಇಬ್ಬರು ಕಾರ್ಮಿಕರು ಪರಿಶೀಲಿಸಲು ಪ್ರಯತ್ನಿಸಿದರು.
ಅವರು ವಿಷಾನಿಲ ಸೇವಿಸಿ ಅಸ್ವಸ್ಥಗೊಂಡರು. ಅನಂತರ ಮತ್ತೆ ಮೂವರು ಕಾರ್ಮಿಕರು ಅಸ್ವಸ್ಥಗೊಂಡರು ಎಂದು ಉಪ ವಿಭಾಗೀಯ ದಂಡಾಧಿಕಾರಿ (ಎಸ್ಡಿಎಂ) ಭೂಪೇಂದ್ರ ಸಿಂಗ್ ಖುಶ್ವಾಹ ಹೇಳಿದ್ದಾರೆ. ಕೂಡಲೇ ಎಲ್ಲರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಎಲ್ಲರೂ ಮೃತಪಟ್ಟಿದ್ದಾರೆ ಎಂದು ಸಿವಿಲ್ ಸರ್ಜನ್ ಗಜೇಂದ್ರ ಸಿಂಗ್ ಪ್ರಕಟಿಸಿದರು ಹಾಗೂ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಎಂದು ಅವರು ತಿಳಿಸಿದ್ದಾರೆ.
ಘಟನೆಯ ಬಳಿಕ ಜಿಲ್ಲಾ ಅಧಿಕಾರಿಗಳು ಕಾರ್ಖಾನೆಯನ್ನು ಖಾಲಿ ಮಾಡಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.