ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್, ಹರ್ಯಾಣದಲ್ಲಿ ರೈತರಿಂದ ಟ್ರ್ಯಾಕ್ಟರ್ ರ್ಯಾಲಿ
PC : ANI
ಚಂಡಿಗಢ : ಎಪ್ಪತ್ತೆಂಟನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಗ್ಯಾರಂಟಿ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಪಂಜಾಬ್ ಹಾಗೂ ಹರ್ಯಾಣದ ಹಲವು ಸ್ಥಳಗಳಲ್ಲಿ ರೈತರು ಗುರುವಾರ ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.
ರೈತರ ಬೇಡಿಕೆಗಳನ್ನು ಬೆಂಬಲಿಸಿ ‘ದಿಲ್ಲಿ ಚಲೋ’ ರ್ಯಾಲಿಯ ನೇತೃತ್ವ ವಹಿಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಟ್ರ್ಯಾಕ್ಟರ್ ರ್ಯಾಲಿಗೆ ಕರೆ ನೀಡಿತ್ತು.
ಅಮೃತಸರದಲ್ಲಿ ಗುರುವಾರ ನಡೆದ ರ್ಯಾಲಿಯಲ್ಲಿ ರಾಷ್ಟ್ರ ಧ್ವಜ ಹಾಗೂ ರೈತ ಸಂಘಟನೆಗಳ ಧ್ವಜಗಳನ್ನು ಅಳವಡಿಸಿದ ಸುಮಾರು 600 ಟ್ರ್ಯಾಕ್ಟರ್ಗಳು ಪಾಲ್ಗೊಂಡವು.
ರೈತ ನಾಯಕ ಸರವನ್ ಸಿಂಗ್ ಪಂಧೇರ್ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ಟ್ರ್ಯಾಕ್ಟರ್ ರ್ಯಾಲಿ ಅತ್ತಾರಿಯಿಂದ ಆರಂಭವಾಯಿತು. ಸುಮಾರು 30 ಕಿ.ಮೀ. ಕ್ರಮಿಸಿದ ಬಳಿಕ ರ್ಯಾಲಿ ಗೋಲ್ಡನ್ ಗೇಟ್ ನಲ್ಲಿ ಸಮಾಪನೆಗೊಂಡಿತು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಗ್ಯಾರಂಟಿ ನೀಡಬೇಕೆಂಬ ತಮ್ಮ ಬೇಡಿಕೆಯನ್ನು ಪರಿಗಣಿಸದ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಡ ಪಂಧೇರ್, ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಪಡೆಯುತ್ತಿಲ್ಲ ಎಂದು ಹೇಳಿದರು.
ಬೇಡಿಕೆ ಈಡೇರುವ ವರೆಗೆ ಶಂಭು ಹಾಗೂ ಖನೌರಿ ಗಡಿಯಲ್ಲಿ ತಮ್ಮ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಮುಷ್ಕರದಲ್ಲಿ ಪಾಲ್ಗೊಂಡ ರೈತರು ತಿಳಿಸಿದ್ದಾರೆ.
ಬಠಿಂಡಾದಲ್ಲಿ ಕೂಡ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು. ಹರ್ಯಾಣದ ಅಂಬಾಲದಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ ರೈತರು ಬಾಲಾನಾ, ಶಹಝಾದ್ಪುರ ಹಾಗೂ ನಾರಾಯಣಗಢ ಗ್ರಾಮಗಳ ಮೂಲಕ ಸಾಗಿದರು. ಈ ರ್ಯಾಲಿಯ ನೇತೃತ್ವವನ್ನು ರೈತ ನಾಯಕ ನವದೀಪ್ ಸಿಂಗ್ ವಹಿಸಿದ್ದರು.
ಪಂಚಕುಲದ ಪಿಂಜೋರೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಶಹೀದ್ ಭಗತ್ ಸಿಂಗ್) ನೇತೃತ್ವದಲ್ಲಿ ರೈತರು ಟ್ರ್ಯಕ್ಟರ್ ರ್ಯಾಲಿ ನಡೆಸಿದರು.