ಈರುಳ್ಳಿ ಮೇಲಿನ ಶೇಕಡ 40 ರಫ್ತು ಸುಂಕ ರದ್ದತಿಗೆ ವರ್ತಕರ ಸಂಘ ಆಗ್ರಹ
ನಾಸಿಕ್: ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಶೇಕಡ 40ರ ರಫ್ತು ಸುಂಕವನ್ನು ರದ್ದು ಮಾಡುವವರೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಈರುಳ್ಳಿ ವಹಿವಾಟು ನಡೆಸದಿರಲು ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘ ನಿರ್ಧರಿಸಿದೆ. ತಮ್ಮ ಬೇಡಿಕೆ ಈಡೇರುವವರೆಗೂ ಈಗ ನಡೆಸುತ್ತಿರುವ ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸಹಕಾರ ಕೃಷಿ ಮಾರುಕಟ್ಟೆ ಒಕ್ಕೂಟ (ನಫೆಡ್) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟ (ಎನ್ಸಿಸಿಎಫ್) ಸಗಟು ಮಾರುಕಟ್ಟೆಗಳಿಗೆ ಈರುಳ್ಳಿ ಮಾರಾಟ ಮಾಡುವುದನ್ನು ನಿರ್ಬಂಧಿಸಬೇಕು ಎಂದೂ ಸಂಘ ಒತ್ತಾಯಿಸಿದೆ.
ವರ್ತಕರ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಗ್ರಾಹಕರ ವ್ಯವಹಾರಗಳ ಖಾತೆ ಸಚಿವ ಪಿಯೂಶ್ ಗೋಯಲ್ ಅವರು ನಡೆಸಿದ ಉನ್ನತ ಮಟ್ಟದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಪಿಂಪಲ್ಗಾಂವ್ನಲ್ಲಿ ವರ್ತಕರ ಸಂಘ ನಡೆಸಿದ ತುರ್ತು ಸಭೆಯಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಲಾಗಿದೆ.
"ನಮ್ಮ ಸಮಸ್ಯೆಗಳಿಗೆ ಸರ್ಕಾರ ಯಾವುದೇ ಪರಿಹಾರ ಒದಗಿಸದಿದ್ದರೆ ನಾವು ಹೇಳುವುದು ಏನೂ ಇಲ್ಲ. ಮಾರುಕಟ್ಟೆಯಿಂದ ನಮಗೆ ಪ್ರತಿಫಲ ದೊರಕದಿದ್ದರೆ, ನಾವು ರೈತರಿಗೆ ಪಾವತಿಸುವುದು ಸಾಧ್ಯವಿಲ್ಲ. ಆದ್ದರಿಂದ ವಹಿವಾಟು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ" ಎಂದು ಅಧ್ಯಕ್ಷ ಖಂಡು ದಿಯೋರಾ ಹೇಳಿದ್ದಾರೆ. ಸಂಘ ಸೆಪ್ಟೆಂಬರ್ 20ರಿಂದ ಈರುಳ್ಳಿ ಮಾರಾಟ ಬಹಿಷ್ಕರಿಸಿದೆ.