ಉತ್ತರಾಖಂಡ: ಡಿ.31ರೊಳಗೆ ಮುಸ್ಲಿಮ್ ಕುಟುಂಬಗಳನ್ನು ಊರಿನಿಂದ ಹೊರಹಾಕಲು ಚಮೋಲಿ ವರ್ತಕರ ಆಗ್ರಹ
Photo credit: muslimmirror.com
ಡೆಹ್ರಾಡೂನ್: ಹಿಂದುತ್ವ ಗುಂಪುಗಳು ಸ್ಥಳೀಯ ಮುಸ್ಲಿಮ್ ಸಮುದಾಯವನ್ನು ಹೆಚ್ಚೆಚ್ಚು ಗುರಿಯಾಗಿಸಿಕೊಳ್ಳುತ್ತಿದ್ದು, ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಕೋಮು ಉದ್ವಿಗ್ನತೆಗಳು ಹೆಚ್ಚುತ್ತಿವೆ.
ಇತ್ತೀಚಿಗೆ ಚಮೋಲಿಯ ಖನ್ಸಾರ್ ಪಟ್ಟಣದ ವರ್ತಕರ ಸಂಘವು ಡಿ.31ರೊಳಗೆ ಊರನ್ನು ತೊರೆಯುವಂತೆ 15 ಮುಸ್ಲಿಮ್ ಕುಟುಂಬಗಳಿಗೆ ಆದೇಶಿಸಿ ನಿರ್ಣಯವನ್ನು ಅಂಗೀಕರಿಸಿದೆ. ಪ್ರದೇಶದಲ್ಲಿಯ ಎಲ್ಲ ಹೊರಗಿನವರ ಪರಿಶೀಲನೆಗೂ ಹಿಂದುತ್ವ ಗುಂಪುಗಳು ಆಗ್ರಹಿಸಿದ್ದು,ಇದು ಕೋಮು ಸೌಹಾರ್ದ ಕುರಿತು ಕಳವಳಗಳನ್ನು ಸೃಷ್ಟಿಸಿದೆ ಎಂದು newindianexpress.com ವರದಿ ಮಾಡಿದೆ.
ಈ ನಿರ್ಧಾರವು ದೀರ್ಘಕಾಲದಿಂದ ವಾಸವಾಗಿರುವ ಮುಸ್ಲಿಮ್ ನಿವಾಸಿಗಳಿಗೂ ಆಘಾತ ಮತ್ತು ದಿಗ್ಭ್ರಮೆಯನ್ನುಂಟು ಮಾಡಿದೆ.
‘ವರ್ತಕರ ಸಂಘದ ಈ ಹಠಾತ್ ನಿರ್ಧಾರದಿಂದ ನಾವು ಆತಂಕಗೊಂಡಿದ್ದೇವೆ. ನಾವು ದಶಕಗಳಿಂದಲೂ ಇಲ್ಲಿ ವಾಸವಾಗಿದ್ದೇವೆ ಮತ್ತು ನಮ್ಮ ಕುಟುಂಬಗಳು ಈ ಸಮುದಾಯದ ಅವಿಭಾಜ್ಯ ಭಾಗವಾಗಿವೆ. ಊರು ತೊರೆಯುವಂತೆ ನಮ್ಮನ್ನೇಕೆ ಬಲವಂತಗೊಳಿಸಲಾಗುತ್ತಿದೆ ಎಂದು ಸ್ಥಳೀಯ ಮುಸ್ಲಿಮ್ ನಿವಾಸಿಯೋರ್ವರು ಪ್ರಶ್ನಿಸಿದರು.
ಹಿಂದು ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನೊಳಗೊಂಡ ಅಪರಾಧ ಘಟನೆಗಳನ್ನು ತಡೆಯುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಮೈಥಾನ್ ಸೇವಾ ಸಮಿತಿ ಅಧ್ಯಕ್ಷ ವಿರೇಂದ್ರ ಸಿಂಗ್ ಅವರು,ಮೈಥಾನ್ ಮಾರುಕಟ್ಟೆಯಲ್ಲಿ ಜಾಗೃತಿ ರ್ಯಾಲಿಯ ಬಳಿಕ ವರ್ತಕರ ಸಂಘದ ಸಭೆಯಲ್ಲಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಎಲ್ಲ ಮಾರಾಟಗಾರರು ಖನ್ಸಾರ್ ಕಣಿವೆಯ ಗ್ರಾಮಗಳನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸಿಕ್ಕಿ ಬಿದ್ದ ಮಾರಾಟಗಾರರು 10,000 ರೂ.ದಂಡ ಮತ್ತು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದರು.
‘ಯಾವುದೇ ಸಂದರ್ಭದಲ್ಲಿಯೂ ದೇವಭೂಮಿಯ ವಾತಾವರಣ ಕೆಡಲು ನಾವು ಅವಕಾಶ ನೀಡುವುದಿಲ್ಲ ಮತ್ತು ಶಂಕಿತ ವ್ಯಕ್ತಿಗಳು ಈ ಪ್ರದೇಶದಲ್ಲಿ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂದು ಮೈಥಾನ್ ವ್ಯಾಪಾರ ಸಂಘದ ಅಧ್ಯಕ್ಷ ಬಲದೇವ ಸಿಂಗ್ ನೇಗಿ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವ್ಯಾಪಾರಿಗಳ ರ್ಯಾಲಿಯ ಇತ್ತೀಚಿನ ವೀಡಿಯೊವೊಂದು,ಹೆಚ್ಚಿನವರು ಸ್ಥಳೀಯ ವ್ಯಾಪಾರಿಗಳೇ ಸೇರಿದಂತೆ ರ್ಯಾಲಿಯಲ್ಲಿ ಭಾಗವಹಿಸಿದ್ದವರು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿದ್ದನ್ನು ತೋರಿಸಿದೆ.
ಟೀಕಾಕಾರರು ಇದನ್ನು ಮುಸ್ಲಿಮ್ ಸಮುದಾಯದ ವಿರುದ್ಧ ಸ್ಪಷ್ಟ ತಾರತಮ್ಯದ ಕ್ರಮವಾಗಿದೆ ಎಂದು ಬಣ್ಣಿಸಿದ್ದಾರೆ.
‘ಈ ನಿರ್ಧಾರವು ಸ್ವೀಕಾರಾರ್ಹವಲ್ಲ, ಅದು ಸಮಾನತೆ ಮತ್ತು ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಈ ಪ್ರಸ್ತಾವದ ವಿರುದ್ಧ ನಾವು ಹೋರಾಡುತ್ತೇವೆ ಮತ್ತು ಎಲ್ಲ ನಾಗರಿಕರ ಹಕ್ಕು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುತ್ತೇವೆ’ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರೋರ್ವರು ಹೇಳಿದರು.
‘ಶನಿವಾರ ನಾವು ವ್ಯಾಪಾರ ಸಂಘದ ಸದಸ್ಯರು ಮತ್ತು ಸ್ಥಳೀಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ,ಈ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿರುವವರ ಪರಿಶೀಲನೆ ಮತ್ತು ಅವರ ಮೇಲೆ ಕಣ್ಗಾವಲು ಅಗತ್ಯವಾಗಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ ’ಎಂದು ಚಮೋಲಿಯ ಹಿರಿಯ ಎಸ್ಪಿ ಸರ್ವೇಶ ಪನ್ವಾರ್ ಸುದ್ದಿಸಂಸ್ಥೆಗೆ ತಿಳಿಸಿದರು.