‘‘ಉತ್ತಮ ನ್ಯಾಯದಾನ’’ಕ್ಕಾಗಿ 23 ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆ: ಸುಪ್ರೀಂಕೋರ್ಟ್ ಕೊಲೀಜಿಯಮ್ ಶಿಫಾರಸು
ಸುಪ್ರೀಂಕೋರ್ಟ್ | Photo: PTI
ಹೊಸದಿಲ್ಲಿ: ‘‘ಉತ್ತಮ ನ್ಯಾಯ ದಾನ ವ್ಯವಸ್ಥೆಯನ್ನು ಖಾತರಿ ಪಡಿಸುವುದಕ್ಕಾಗಿ’’ ವಿವಿಧ ಹೈಕೋರ್ಟ್ ಗಳಿಗೆ ಸೇರಿದ 23 ನ್ಯಾಯಾಧೀಶರ ವರ್ಗಾವಣೆಗೆ ಸುಪ್ರೀಂಕೋರ್ಟ್ ಕೊಲೀಜಿಯಮ್ ಶಿಫಾರಸು ಮಾಡಿದೆ. ಅದು ಗುರುವಾರ ತಡ ರಾತ್ರಿ ಇದಕ್ಕೆ ಸಂಬಂಧಿಸಿದ ನಿರ್ಣಯವೊಂದನ್ನು ಅಂಗೀಕರಿಸಿದೆ.
ಈ ಪಟ್ಟಿಯಲ್ಲಿ, ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಶಿಕ್ಷೆಗೆ ತಡೆಯಾಜ್ಞೆ ವಿಧಿಸಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಎಮ್. ಪ್ರಚ್ಛಕ್ ಸೇರಿದ್ದಾರೆ. ಅವರನ್ನು ಪಾಟ್ನಾ ಹೈಕೋರ್ಟ್ ಗೆ ವರ್ಗಾಯಿಸಲಾಗಿದೆ.
ಪ್ರಚ್ಛಕ್ ಅಲ್ಲದೆ, ಗುಜರಾತ್ ಮತ್ತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ಗಳಿಗೆ ಸೇರಿದ ಎಂಟು ನ್ಯಾಯಾಧೀಶರ ಹೆಸರು ಈ ಪಟ್ಟಿಯಲ್ಲಿದೆ. ಗುಜರಾತ್ ಹೈಕೋರ್ಟ್ನ ಇತರ ನ್ಯಾಯಾಧೀಶರೆಂದರೆ- ನ್ಯಾಯಮೂರ್ತಿಗಳಾದ ಎ.ವೈ. ಕೋಗ್ಜೆ, ಕೆ. ಗೀತಾ ಗೋಪಿ ಮತ್ತು ಸಮೀರ್ ಜೆ. ದವೆ. ಅವರನ್ನು ಕ್ರಮವಾಗಿ ಅಲಹಾಬಾದ್, ಮದರಾಸು ಮತ್ತು ರಾಜಸ್ಥಾನ ಹೈಕೋರ್ಟ್ಗಳಿಗೆ ವರ್ಗ ಮಾಡಲು ಶಿಫಾರಸು ಮಾಡಲಾಗಿದೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನ ನ್ಯಾಯಾಧೀಶರಾದ ಅರವಿಂದ್ ಸಿಂಗ್ ಸಂಘವಾನ್, ಅವನೀಶ್ ಝಿಂಗನ್, ರಾಜ್ ಮೋಹನ್ ಸಿಂಗ್ ಮತ್ತು ಅರುಣ್ ಮೊಂಗ ಅವರನ್ನು ಕ್ರಮವಾಗಿ ಅಲಹಾಬಾದ್, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನಕ್ಕೆ ವರ್ಗಾಯಿಸಲಾಗಿದೆ.