ಅವಿವಾಹಿತ, ಕ್ವೀರ್ ದಂಪತಿಗಳೂ ಮಗುವನ್ನು ದತ್ತು ಪಡೆಯಬಹುದು: ಸುಪ್ರೀಂ ಕೋರ್ಟ್
ಸಲಿಂಗ ವಿವಾಹ ಕುರಿತ ತೀರ್ಪಿನ ಮುಖ್ಯಾಂಶಗಳು ಇಲ್ಲಿವೆ…
Photo: PTI
ಹೊಸದಿಲ್ಲಿ: “ಕ್ವೀರ್ ದಂಪತಿಗಳ ಸಹಿತ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು,” ಎಂದು ಸಲಿಂಗ ವಿವಾಹದ ಕುರಿತಂತೆ ತೀರ್ಪು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರ ಚೂಡ್ ಹೇಳಿದ್ದಾರೆ.
ಸಾಮಾನ್ಯ ದಂಪತಿಗಳು ಮಾತ್ರ ಒಳ್ಳೆಯ ಹೆತ್ತವರಾಗಬಹುದು ಎಂಬ ಭಾವನೆಯು ಕ್ವೀರ್ ದಂಪತಿಗಳ ವಿರುದ್ಧ ತಾರತಮ್ಯವೆಸಗಿದಂತೆ ಎಂದೂ ಸಿಜೆಐ ಹೇಳಿದ್ದಾರೆ.
ಲೈಂಗಿಕ ಧೋರಣೆಯ ಆಧಾರದಲ್ಲಿ ಮದುವೆಯಾಗುವ ವ್ಯಕ್ತಿಯೊಬ್ಬನ ಹಕ್ಕನ್ನು ನಿರ್ಬಂಧಿಸಲಾಗದು ಎಂದು ಹೇಳಿದ ಸುಪ್ರೀಂ ಕೋರ್ಟ್, ಸಲಿಂಗಿ ದಂಪತಿಗಳು ರೇಷನ್ ಕಾರ್ಡ್, ಪಿಂಚಣಿ ಮತ್ತಿತರ ಸವಲತ್ತುಗಳನ್ನು ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಬೇಕು ಎಂದು ಸೂಚಿಸಿದೆ.
“ಮದುವೆಯಾಗುವ ಹಕ್ಕಿನಲ್ಲಿ ಒಬ್ಬರ ಸಂಗಾತಿಯನ್ನು ಆರಿಸುವ ಹಕ್ಕು ಮತ್ತು ಆದನ್ನು ಮಾನ್ಯ ಮಾಡುವ ಹಕ್ಕು ಸೇರಿದೆ. ಇದನ್ನು ಪರಿಗಣಿಸಲು ವಿಫಲವಾದಲ್ಲಿ ಅದು ಕ್ವೀರ್ ದಂಪತಿಗಳ ವಿರುದ್ಧ ತಾರತಮ್ಯ ತೋರಿದಂತೆ,” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.
ಮದುವೆ ಕುರಿತು ಸಮಾನತೆ ಒಂದು ನಗರ ಪ್ರದೇಶದ ಇಲೈಟ್ ಪರಿಕಲ್ಪನೆ ಎಂಬ ಕೇಂದ್ರದ ವಾದಕ್ಕೆ ಅಸಮ್ಮತಿ ಸೂಚಿಸಿದ ಮುಖ್ಯ ನ್ಯಾಯಮೂರ್ತಿಗಳು, “ಕ್ವೀರ್ ಆಗಿರುವುದು ಅರ್ಬನ್ ಇಲೈಟ್ ವಿಚಾರವಲ್ಲ. ಸಲಿಂಗಿಗಳಾಗಿರುವುದು ಅಥವಾ ಕ್ವೀರ್ ಆಗಿರುವುದು ನಗರ ಪ್ರದೇಶದ ಪರಿಕಲ್ಪನೆಯಲ್ಲ ಮತ್ತು ಸಮಾಜದ ಮೇಲ್ವರ್ಗಗಳಿಗೆ ಸೀಮಿತವಲ್ಲ,” ಎಂದು ಹೇಳಿದ್ದಾರೆ.
ಸಲಿಂಗ ವಿವಾಹ ಕುರಿತ ತೀರ್ಪಿನ ಮುಖ್ಯಾಂಶಗಳು
►ತೃತೀಯ ಲಿಂಗಿ ವ್ಯಕ್ತಿ ಮಹಿಳೆಯನ್ನು ವಿವಾಹವಾಗಬಹುದು ಹಾಗೂ ತೃತೀಯ ಲಿಂಗಿ ಮಹಿಳೆಯು ಪುರುಷನನ್ನು ವಿವಾಹವಾಗಬಹುದು
► ವಿಶೇಷ ವಿವಾಹ ಕಾಯಿದೆಯು ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಕಾರಣಕ್ಕೆ ಅದನ್ನು ಅಸಂವಿಧಾನಿಕ ಎಂದು ಘೋಷಿಸಲು ಆಗದು.
► ಸಾಮಾನ್ಯ ದಂಪತಿಗಳು ಮಾತ್ರ ಒಳ್ಳೆಯ ಹೆತ್ತವರಾಗಬಹುದು ಎಂಬ ಊಹೆ ತಪ್ಪು ಎಂದು ಹೇಳಿದ ಸುಪ್ರೀಂ ಕೋರ್ಟ್ ಕ್ವೀರ್ ಮತ್ತು ಅವಿವಾಹಿತ ದಂಪತಿಗಳ ಮಕ್ಕಳ ದತ್ತು ಪಡೆಯುವಿಕೆ ತಡೆಯುವಿಕೆಗೆ ಸಂಬಂಧಿಸಿದ ಸಿಎಆರ್ಎ ನಿಬಂಧನೆಗಳನ್ನು ರದ್ದುಗೊಳಿಸಿದೆ.
►ಕ್ವೀರ್ ಸಮುದಾಯಕ್ಕೆ ಯಾವುದೇ ಸೇವೆಯನ್ನು ಅಥವಾ ಸವಲತ್ತನ್ನು ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.
►ಲಿಂಗದ ಗುರುತಿನ ಬಗ್ಗೆ ವಿಚಾರಿಸಲೆಂದೇ ಠಾಣೆಗೆ ಬರ ಹೇಳಿ ಕ್ವೀರ್ ಸಮುದಾಯಕ್ಕೆ ಯಾವುದೇ ಕಿರುಕುಳ ನೀಡಬಾರದು, ತಮ್ಮ ಹೆತ್ತವರ ಕುಟುಂಬಕ್ಕೆ ಮರಳುವಂತೆ ಕ್ವೀರ್ ಸಮುದಾಯದವರಿಗೆ ಪೊಲೀಸರು ಬಲವಂತಪಡಿಸುವಂತಿಲ್ಲ.
ಅವರಿಗೆ ಹಾರ್ಮೋನಲ್ ಥೆರಪಿಗೆ ಒಳಗಾಗುವಂತೆಯೂ ಬಲವಂತಪಡಿಸುವ ಹಾಗಿಲ್ಲ.
► ಸಾರ್ವಜನಿಕರಿಗೆ ಕ್ವೀರ್ ಸಮುದಾಯದ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಈ ಸಮುದಾಯಕ್ಕಾಗಿ ಹಾಟ್ಲೈನ್ ರಚಿಸಬೇಕು, ಅವರಿಗಾಗಿ ಸುರಕ್ಷಿತ ತಾಣಗಳನ್ನು ನಿರ್ಮಿಸಬೇಕು, ತೃತೀಯ ಲಿಂಗಿ ಮಕ್ಕಳಿಗೆ ಶಸ್ತ್ರಕ್ರಿಯೆಗೆ ಬಲವಂತಪಡಿಸಬಾರದು.
►ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕ್ವೀರ್ ಸಮುದಾಯದ ಕುರಿತಂತೆ ತಾರತಮ್ಯ ಮಾಡಬಾರದು.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂಬ ಮನವಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಮೇ ತಿಂಗಳಿನಲ್ಲಿ ಕಾಯ್ದಿರಿಸಿತ್ತು.
ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಎಸ್.ಕೆ.ಕೌಲ್, ನ್ಯಾಯಮೂರ್ತಿ ಎಸ್ ಆರ್ ಭಟ್, ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠವು ನಡೆಸಿದೆ. ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಹಾಗೂ ಆ ಅರ್ಜಿಗಳಿಂದ ಎದುರಾಗಲಿರುವ ಕಾನೂನು ಮತ್ತು ಸಾಮಾಜಿಕ ಪ್ರಶ್ನೆಗಳ ಕುರಿತು ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಸುಪ್ರೀಂ ಕೋರ್ಟ್ ನಿರಂತರವಾಗಿ ವಿಚಾರಣೆ ನಡೆಸಿತ್ತು.
ತಮ್ಮ ಸಂಬಂಧಕ್ಕೆ ‘ವಿವಾಹ’ ಎಂಬ ಕಾನೂನಾತ್ಮಕ ಹಾಗೂ ಸಾಮಾಜಿಕ ಸ್ಥಾನವನ್ನು ನೀಡಬೇಕು ಎಂದಕೋರಿ 18 ದಂಪತಿಗಳು ಅರ್ಜಿಗಳ ಸಲ್ಲಿಸಿದ್ದರು.
ಇದರೊಂದಿಗೆ, ಇಂತಹ ಸಂಬಂಧಗಳನ್ನು ವಿಶೇಷ ವಿವಾಹ ಕಾಯ್ದೆ ಅಡಿ ‘ವಿವಾಹ’ ಎಂದು ಘೋಷಿಸಬೇಕು ಎಂದೂ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿದೆ.
ಆದರೆ, ಸಲಿಂಗ ವಿವಾಹಕ್ಕೆ ವೈವಾಹಿಕ ಸ್ಥಾನಮಾನ ನೀಡುವುದರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ರೂಢಿಗಳೊಂದಿಗೆ ಸಂಬಂಧ ಹೊಂದಿರುವ ಕಾನೂನಾತ್ಮಕ ತೊಡಕು ಎದುರಾಗಲಿದೆ. ಹೀಗಾಗಿ ಈ ವಿಷಯವು ವೈಯಕ್ತಿಕ ಕಾನೂನಿನಡಿ ರಾಷ್ಟ್ರ ಹಾಗೂ ಸಾಮಾಜಿಕ ಮಟ್ಟದಲ್ಲಿ ವಿಸ್ತಾರ ಚರ್ಚೆಗೊಳಗಾಗಬೇಕಿದೆ ಎಂದು ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಎದುರು ಪ್ರತಿವಾದ ಮಂಡಿಸಿವೆ.