ಶರ್ಜೀಲ್ ಇಮಾಮ್ಗೆ ಜಾಮೀನು ನಿರಾಕರಿಸಲು ಯಾವುದೇ ಕಾರಣವಿರಲಿಲ್ಲ: ವಿಚಾರಣಾ ನ್ಯಾಯಾಲಯದ ಹಿಂದಿನ ಆದೇಶ ಕುರಿತು ದಿಲ್ಲಿ ಹೈಕೋರ್ಟ್ ಅಭಿಮತ

ಶರ್ಜೀಲ್ ಇಮಾಮ್ | PC : PTI
ಹೊಸದಿಲ್ಲಿ: ದೇಶದ್ರೋಹ ಮತ್ತು ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಬಂಧನದಲ್ಲಿರುವ ಹೋರಾಟಗಾರ ಶರ್ಜೀಲ್ ಇಮಾಮ್ ಅವರ ವಿರುದ್ಧ ಇರುವ ಹಲವಾರು ಆರೋಪಗಳನ್ನು ಮನಗಂಡು ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ನಿರಾಕರಿಸಿತ್ತು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ಇಮಾಮ್ ಅವರಿಗೆ ಸೆಕ್ಷನ್ 436ಎ ಅಡಿಯಲ್ಲಿ ಜಾಮೀನು ನಿರಾಕರಿಸುವಂತಹ ಯಾವುದೇ ಅಂಶವಿರಲಿಲ್ಲ ಎಂದೂ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರ ಪೀಠ ಹೇಳಿದೆ.
“ಅವರು ನೀಡಿದ್ದ ಪ್ರಚೋದನಾತ್ಮಕ ಭಾಷಣಗಳಿಂದ ದಂಗೆಗಳು ಉಂಟಾಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಯಿತು. ಆದರೆ ಈ ಪ್ರಕರಣದಲ್ಲಿ ಜಾಮೀನು ನಿರಾಕರಿಸಲು ಯಾವುದೇ ಸಮರ್ಥನೀಯ ಕಾರಣ ನಮಗೆ ಕಾಣುತ್ತಿಲ್ಲ,” ಎಂದು ಶರ್ಜೀಲ್ ಇಮಾಮ್ಗೆ ಜಾಮೀನು ಮಂಜೂರುಗೊಳಿಸುವ ಮೇ 29ರ ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಆಲಿಘರ್ ಮುಸ್ಲಿಂ ವಿವಿ ಮತ್ತು ದಿಲ್ಲಿಯ ಜಮೀಯ ಮಿಲ್ಲಿಯಾ ಇಸ್ಲಾಮಿಯಾ ಸಮೀಪ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ ಆರೋಪವನ್ನು ಶರ್ಜೀಲ್ ಇಮಾಮ್ ಎದುರಿಸುತ್ತಿದ್ದಾರೆ.
ಒಬ್ಬ ಆರೋಪಿಯ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂಬ ಮಾತ್ರಕ್ಕೆ ಜಾಮೀನು ನಿರಾಕರಿಸಲು ಅದು ಆಧಾರವಾಗದು ಎಂದು ನ್ಯಾಯಪೀಠ ಹೇಳಿದೆ.
ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ ಶರ್ಜೀಲ್ ಇಮಾಮ್ ಹೈಕೋರ್ಟ್ ಕದ ತಟ್ಟಿದ್ದರು. ತಮ್ಮ ವಿರುದ್ಧದ ಆರೋಪ ಸಾಬೀತಾದಲ್ಲಿ ಗರಿಷ್ಠ ಏಳು ವರ್ಷ ಶಿಕ್ಷೆ ಲಭಿಸಬಹುದಾಗಿರುವಾಗ ತಾನು ಈಗಾಗಲೇ ನಾಲ್ಕು ವರ್ಷ ಜೈಲುವಾಸ ಅನುಭವಿಸಿರುವ ಕುರಿತಂತೆ ಶರ್ಜೀಲ್ ಇಮಾಮ್ ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದರು.