ಛತ್ತೀಸ್ ಗಢದ ಈ ಆರು ಗ್ರಾಮಗಳಲ್ಲಿ ಮೊಟ್ಟಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ!
ರಾಂಚಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಕ್ಸಲ್ ಪೀಡಿತ ಛತ್ತೀಸ್ ಗಢ ರಾಜ್ಯದ ಬಸ್ತರ್ ಪ್ರದೇಶದ ಆರು ಗುಡ್ಡಗಾಡು ಗ್ರಾಮಗಳಲ್ಲಿ ತ್ರಿವರ್ಣ ಧ್ವಜಾರೋಹಣ ನಡೆಯುತ್ತಿದೆ ಎಂದು ಪೊಲೀಸರು ಪ್ರಕಟಿಸಿದ್ದಾರೆ.
ಈ ಗ್ರಾಮಗಳಲ್ಲಿ ಭದ್ರತಾ ಪಡೆಗಳು ಹೊಸ ಶಿಬಿರಗಳನ್ನು ಆರಂಭಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ ಎಂದು ವಿವರಿಸಿದ್ದಾರೆ.
"ಬಿಜಾಪುರ ಜಿಲ್ಲೆಯ ಚಿನ್ನಗೆಲೂರು, ತಿಮೆನಾರ್ ಮತ್ತು ಹಿರೋಲಿ ಗ್ರಾಮಗಳಲ್ಲಿ ಮತ್ತು ಸುಕ್ಮಾ ಜಿಲ್ಲೆಯ ಬೆದ್ರೆ, ದುಬ್ಬಮಾರ್ಕಾ ಮತ್ತು ತೊಂಡಮಾರ್ಕಾ ಗ್ರಾಮಗಳಲ್ಲಿ ಮಂಗಳವಾರ ರಾಷ್ಟ್ರಧ್ವಜಾರೋಹಣಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ದೇಶ ಸ್ವತಂತ್ರಗೊಂಡ ಬಳಿಕ ಎಂದೂ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆದಿರಲಿಲ್ಲ" ಎಂದು ಬಸ್ತರ್ ವಲಯದ ಐಜಿಪಿ ಸುಂದರ್ರಾಜ್ ಹೇಳಿದ್ದಾರೆ.
ಈ ಗ್ರಾಮಗಳ ಹೊರತಾಗಿ ಇದೇ ಮೊದಲ ಬಾರಿಗೆ ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸಿದ ಸುಕ್ಮಾ ಜಿಲ್ಲೆಯ ಪಿದಮೆಲ್, ದುಬ್ಬಕೋಂಟಾ, ಸಿಲ್ಗೇರ್ ಮತ್ತು ಕುಂಡೆಡ್ ಗ್ರಾಮಗಳಲ್ಲಿ ಕೂಡಾ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಈ ಗ್ರಾಮಗಳಲ್ಲಿ ಭದ್ರತಾ ಶಿಬಿರಗಳನ್ನು ವ್ಯವಸ್ಥೆಗೊಳಿಸುವ ಮೂಲಕ, ನಕ್ಸಲೀಯರಿಗೆ ಹಿನ್ನಡೆಯಾಗಿದೆ. ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವ ದಿನದಂದು ಕಪ್ಪು ಬಾವುಟ ಹಾರಿಸುವ ಪ್ರಕರಣಗಳು ಬಹುತೇಕ ಶೂನ್ಯವಾಗುವಷ್ಟು ಇಳಿಕೆಗೆ ಕಾರಣವಾಗಿದೆ. ಹೆಚ್ಚಿನ ಉತ್ಸಾಹ ಹಾಗೂ ರಾಷ್ಟ್ರ ಪ್ರೇಮದೊಂದಿಗೆ ತ್ರಿವರ್ಣ ಧ್ವಜಾರೋಹಣ ನಡೆಸಲಾಗುತ್ತಿದೆ" ಎಂದು ಅವರು ಬಣ್ಣಿಸಿದ್ದಾರೆ.
ಹೊಸ ಭದ್ರತಾ ಶಿಬಿರಗಳನ್ನು ಆರಂಭಿಸುವ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳು ಜನತೆಗೆ ಅದರಲ್ಲೂ ಮುಖ್ಯವಾಗಿ ಆದಿವಾಸಿಗಳಿಗೆ ತಲುಪಲು ಸಾಧ್ಯವಾಗುತ್ತಿದೆ. ಜತೆಗೆ ಈ ಪ್ರದೇಶದ ಅಭಿವೃದ್ಧಿಗೂ ಇದು ದಾರಿ ಮಾಡಿಕೊಟ್ಟಿದೆ ಎಂದು ವಿವರಿಸಿದ್ದಾರೆ. ಬಸ್ತರ್ ವಿಭಾಗದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಗಳು ಮೂರು ದಶಕಗಳಿಂದ ನಕ್ಸಲೀಯ ಚಟುವಟಿಕೆಗಳಿಂದ ಕುಖ್ಯಾತಿ ಪಡೆದಿವೆ.