ಪಶ್ಚಿಮ ಬಂಗಾಳ : ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ
ಸಾಂಧರ್ಬಿಕ ಚಿತ್ರ
ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ದುಲಾಲ್ ಸರ್ಕಾರ್ ಹತ್ಯೆ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮತ್ತೋರ್ವ ಟಿಎಂಸಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕಲಿಯಾಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲಿಯಾಗಂಜ್ ಪ್ರದೇಶದಲ್ಲಿ ಮಂಗಳವಾರ ಟಿಎಂಸಿ ಸ್ಥಳೀಯ ಸಮಿತಿ ಅಧ್ಯಕ್ಷ ಬಕುಲ್ ಶೇಖ್ ಮತ್ತು ಪಕ್ಷದ ಇತರ ಕಾರ್ಯಕರ್ತರು ರಸ್ತೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ನಾಲ್ಕೈದು ಮಂದಿ ದುಷ್ಕರ್ಮಿಗಳು ಬಕುಲ್ ಶೇಖ್ ಮತ್ತು ಅವರ ಸಹಚರರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಟಿಎಂಸಿ ಕಾರ್ಯಕರ್ತ ಅತಾವುಲ್ ಹಕ್ ಅಲಿಯಾಸ್ ಹಸು ಶೇಖ್ ಅವರು ಸ್ಥಳದಲ್ಲಿಯೇ ಮೃತಪಟ್ಟರೆ, ಬಕುಲ್ ಶೇಖ್ ಮತ್ತು ಎಸರುದ್ದೀನ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಟಿಎಂಸಿ ಪಕ್ಷದ ಕಾರ್ಯಕರ್ತರೋರ್ವರು ಮಾಲ್ಡಾ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಇನ್ನಿಬ್ಬರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ನಾವು ಸಾಕ್ಷಿಗಳು ಮತ್ತು ಇತರರನ್ನು ಪ್ರಶ್ನಿಸುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಕೂಡ ಬಂಧಿಸಲಾಗಿಲ್ಲʼ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.