ತ್ರಿಪುರಾ: ದೇವಸ್ಥಾನದ ವಿಗ್ರಹ ವಿರೂಪಗೊಳಿಸಿದ ನಂತರ ಕೋಮು ಘರ್ಷಣೆ | 12 ಮನೆಗಳಿಗೆ ಬೆಂಕಿ
PC : newindianexpress.com
ಅಗರ್ತಲಾ: ಪಶ್ಚಿಮ ತ್ರಿಪುರಾದ ರಾಣೀರ್ ಬಜಾರ್ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಿದ ನಂತರ ಕೋಮು ಘರ್ಷಣೆ ಉಲ್ಬಣಗೊಂಡಿದ್ದು, ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉದ್ವಿಗ್ನತೆಯನ್ನು ಶಮನಗೊಳಿಸಲು ಸ್ಥಳದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ.
"ಕೈತೂರಬಾರಿಯಲ್ಲಿ ಕಾಳಿ ದೇವಿಯ ವಿಗ್ರಹವು ವಿರೂಪಗೊಂಡಿರುವುದನ್ನು ಕಂಡು ರವಿವಾರ ತಡರಾತ್ರಿ ರಾಣಿರ್ ಬಜಾರ್ನಲ್ಲಿ ಸುಮಾರು 12 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಕೆಲವು ಬೈಕ್ ಮತ್ತು ಪಿಕ್-ಅಪ್ ವ್ಯಾನ್ಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ" ಎಂದು ಸಹಾಯಕ ಇನ್ಸ್ಪೆಕ್ಟರ್ ಜನರಲ್ (ಕಾನೂನು ಮತ್ತು ಸುವ್ಯವಸ್ಥೆ) ಅನಂತ ದಾಸ್ ಅವರು ಪಿಟಿಐಗೆ ತಿಳಿಸಿದರು.
ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಉದ್ರಿಕ್ತ ಗುಂಪನ್ನು ನೋಡಿದ ನಿವಾಸಿಗಳು ತಮ್ಮ ಮನೆಗಳಿಂದ ಓಡಿಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗುಪ್ತಚರ ವಿಭಾಗದ ಪೊಲೀಸ್ ಮಹಾನಿರ್ದೇಶಕರು , ಅನುರಾಗ್ ಧಂಕರ್ ಮತ್ತು ಪಶ್ಚಿಮ ತ್ರಿಪುರಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಕುಮಾರ್ ಅವರು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
"ಆಸ್ತಿ ನಷ್ಟದ ಮೌಲ್ಯಮಾಪನ ಪೂರ್ಣಗೊಂಡ ನಂತರ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸುತ್ತಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಅವರು ಹೇಳಿದರು.
ಘಟನೆಯ ಬಗ್ಗೆ ಸೋಮವಾರ ತಿಪ್ರಾ ಮೋಥಾ ಮುಖ್ಯಸ್ಥ ಪ್ರದ್ಯೋತ್ ಕಿಶೋರ್ ಮಾಣಿಕ್ಯ ದೆಬ್ಬರ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ. ಪ್ರವಾಹದಿಂದ ಚೇತರಿಸಿಕೊಳ್ಳುವಾಗ ರಾಜಕೀಯಕ್ಕೆ ಬಲಿಯಾಗಿ ಕೋಮು ದಳ್ಳುರಿ ಎದ್ದಿರುವುದಕ್ಕೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ ತ್ರಿಪುರಾ ಭೀಕರ ಪ್ರವಾಹಕ್ಕೆ ತುತ್ತಾಗಿತ್ತು. ಭೀಕರ ಪ್ರವಾಹದಿಂದಾಗಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. 1.17 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ತಿಳಿದು ಬಂದಿದೆ.