ತ್ರಿಪುರಾ: ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆಯ ಹೊರಗೆ ತಡೆದವರನ್ನು ಆಕ್ಷೇಪಿಸಿದ ಬಾಲಕನಿಗೆ ಥಳಿತ
Photo: NDTV
ಅಗರ್ತಲಾ: ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಶಾಲೆಗೆ ಪ್ರವೇಶಿಸುವುದನ್ನು ವಿರೋಧಿಸಿದ ಬಲಪಂಥೀಯ ಗುಂಪಿನ ಸದಸ್ಯರಿಗೆ ಆಕ್ಷೇಪಿಸಿದ ಮುಸ್ಲಿಂ ಬಾಲಕನೊಬ್ಬನಿಗೆ ಥಳಿಸಿದ ಘಟನೆ ತ್ರಿಪುರಾದ ಸೆಪಹಿಜಲ ಜಿಲ್ಲೆಯ ಬಿಶಾಲಘರ್ ಎಂಬಲ್ಲಿನ ಶಾಲೆಯ ಹೊರಗೆ ಶುಕ್ರವಾರ ನಡೆದಿದೆ.
ಸಂತ್ರಸ್ತ ಬಾಲಕ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಆತನನ್ನು ಹೊರಗೆಳೆದು ಶಾಲೆಯ ಮುಂದೆ ಥಳಿಸಿದಾಗ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಆತನ ರಕ್ಷಣೆಗೆ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ಆಕ್ರೋಶಿತರಾದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿನಿಯರನ್ನು ತಡೆದವರು ಹೊರಗಿನವರಾಗಿದ್ದು ಶಾಲೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.
ಶಾಲಾಡಳಿತದ ಪ್ರಕಾರ ಒಂದು ವಾರದ ಹಿಂದೆ, ಬಲಪಂಥೀಯ ಸಂಘಟನೆಗೆ ಸೇರಿದವರೆಂದು ಹೇಳಿಕೊಂಡು ಬಂದ ಶಾಲೆಯ ಹಳೆ ವಿದ್ಯಾರ್ಥಿಗಳ ಒಂದು ಗುಂಪು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸುತ್ತಿರುವುದನ್ನು ವಿರೋಧಿಸಿ ಹಿಜಾಬ್ ನಿಷೇಧಿಸಬೇಕೆಂದು ಆಗ್ರಹಿಸಿದ್ದರು.
ಈ ಹಳೆ ವಿದ್ಯಾರ್ಥಿಗಳು ವಿಶ್ವ ಹಿಂದು ಪರಿಷದ್ಗೆ ಸೇರಿದವರು ಹಾಗೂ ತಮ್ಮನ್ನು ಭೇಟಿಯಾಗಿದ್ದರೆಂದು ಶಾಲಾ ಪ್ರಾಂಶುಪಾಲ ಪ್ರಿಯತೋಶ್ ನಂದಿ ಹೇಳಿದ್ದಾರೆ. ಆದರೆ ಹಿಜಾಬ್ ನಿಷೇಧ ಕುರಿತು ಯಾವುದೇ ಸರಕಾರಿ ಆದೇಶವಿಲ್ಲದೇ ಇರುವುದರಿಂದ ವಿದ್ಯಾರ್ಥಿನಿಯರಿಗೆ ಶಾಲೆಗೆ ಬರುವಾಗ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಿದ್ದರೆನ್ನಲಾಗಿದೆ.
ಶುಕ್ರವಾರದ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ತಲೆದೋರಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ ಹಾಗೂ ಶಾಲೆಯ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ.