ತ್ರಿಪುರಾ : ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ಪ್ರವೇಶ, ಏಳು ಜನರ ಬಂಧನ
ಸಾಂದರ್ಭಿಕ ಚಿತ್ರ
ಅಗರ್ತಲಾ : ಎರಡು ಪ್ರತ್ಯೇಕ ಘಟನೆಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ತ್ರಿಪುರಾವನ್ನು ಪ್ರವೇಶಿಸಿದ್ದ ಐವರು ಬಾಂಗ್ಲಾದೇಶಿಗಳು ಮತ್ತು ಇಬ್ಬರು ರೊಹಿಂಗ್ಯಾಗಳನ್ನು ಬಂಧಿಸಲಾಗಿದೆ ಎಂದು ಪೋಲಿಸರು ರವಿವಾರ ತಿಳಿಸಿದರು.
ಮಾಹಿತಿಯ ಮೇರೆಗೆ ರೈಲ್ವೆ ಪೋಲಿಸರು ಶುಕ್ರವಾರ ಅಗರ್ತಲಾ ನಿಲ್ದಾಣದಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದರು. ತಾವು ಬಾಂಗ್ಲಾದೇಶದಲ್ಲಿಯ ಕಾಕ್ಸ್ ಬಜಾರ್ ರೊಹಿಂಗ್ಯಾ ಶಿಬಿರದ ನಿವಾಸಿಗಳು ಎಂದು ಅವರು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು.
ಅಂತರರಾಷ್ಟೀಯ ಗಡಿಯನ್ನು ದಾಟಿದ್ದ ರಮಜಾನ್ ಅಲಿ ಮತ್ತು ಅಝಿದಾ ಬೇಗಂ ರೈಲಿನ ಮೂಲಕ ಕೋಲ್ಕತಾಕ್ಕೆ ಪ್ರಯಾಣಿಸಲು ಯೋಜಿಸಿದ್ದರು ಎಂದು ಪೋಲಿಸರು ತಿಳಿಸಿದರು.
ಪ್ರತ್ಯೇಕ ಘಟನೆಯಲ್ಲಿ ಶನಿವಾರ ಧಲಾಯಿ ಜಿಲ್ಲೆಯಲ್ಲಿ ಐವರು ಬಾಂಗ್ಲಾದೇಶಿ ನುಸುಳುಕೋರರು ಮತ್ತು ಇಬ್ಬರು ಶಂಕಿತ ಭಾರತೀಯ ಏಜೆಂಟ್ರನ್ನು ಬಂಧಿಸಲಾಗಿದೆ.
ಬಂಧಿತ ಬಾಂಗ್ಲಾದೇಶಿಗಳು ಅಲ್ಲಿಯ ಮೌಲ್ವಿಬಜಾರ್ ಮತ್ತು ಸಿಲೆಟ್ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ. ಅವರು ಸೂಕ್ತ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ್ದರು ಮತ್ತು ಇಬ್ಬರು ಭಾರತೀಯರು ಅವರ ಅಕ್ರಮ ವಲಸೆಗೆ ನೆರವಾಗಿದ್ದರು ಎಂದು ನಂಬಲಾಗಿದೆ ಎಂದು ಬಿಎಸ್ಎಫ್ ಅಧಿಕಾರಿಯೋರ್ವರು ತಿಳಿಸಿದರು.