ನಿದ್ದೆಗೆ ತೊಂದರೆ: ಸೇನಾಧಿಕಾರಿ, ಸಿಐಎಸ್ಎಫ್ ಸಿಬ್ಬಂದಿ ಪತ್ನಿಯರಿಂದ ನಾಯಿಮರಿಗಳ ಸಜೀವ ದಹನ!
ಸಾಂದರ್ಭಿಕ ಚಿತ್ರ PC: istockphoto.com
ಮೀರಠ್: ಸುಖ ನಿದ್ದೆಗೆ ತೊಂದರೆ ಕೊಟ್ಟ ನೆಪದಲ್ಲಿ, ಸೇನಾಧಿಕಾರಿ ಪತ್ನಿ ಹಾಗೂ ಸಿಐಎಸ್ಎಫ್ ಸಿಬ್ಬಂದಿಯೊಬ್ಬರ ಪತ್ನಿ ಐದು ನಾಯಿಮರಿಗಳನ್ನು ಜೀವಂತವಾಗಿ ದಹಿಸಿದ ಘಟನೆ ವರದಿಯಾಗಿದೆ. ಖಂಕರ್ ಖೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂತನಗರ ಕಾಲೊನಿಯಲ್ಲಿ ಗುರುವಾರ ಬೆಳಿಗ್ಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಣಿ ದಯಾ ಸಂಘದವರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಬಳಿಕ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾಯಿ ಮರಿಗಳು ರಾತ್ರಿಯ ವೇಳೆ ಬೊಗಳುವುದರಿಂದ ತಮ್ಮ ಸುಖನಿದ್ದೆಗೆ ತೊಂದರೆಯಾಗುತ್ತಿದೆ ಎಂಬ ಸಿಟ್ಟಿನಿಂದ ಶೋಭಾ ಮತ್ತ ಆರತಿ ಎಂಬ ಇಬ್ಬರು ಮಹಿಳೆಯರು ಈ ನಿರ್ಧಾರಕ್ಕೆ ಬಂದು ನಾಯಿಗಳನ್ನು ಸುಟ್ಟುಹಾಕಿದರು ಎಂದು ಆನಿಮಲ್ ಕೇರ್ ಸೊಸೈಟಿ ಕಾರ್ಯದರ್ಶಿ ಅಂಶುಮಾಲಿ ವಸಿಷ್ಠ ಹೇಳಿದ್ದಾರೆ.
"ಇಬ್ಬರು ಮಹಿಳೆಯರು ಮೂರು ದಿನಗಳ ಹಿಂದಷ್ಟೇ ಹುಟ್ಟಿದ್ದ ನಾಯಿಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇನ್ನೂ ಕಣ್ಣನ್ನು ಕೂಡಾ ತೆರೆಯದ ನಾಯಿಮರಿಗಳು ಕ್ರೌರ್ಯಕ್ಕೆ ಬಲಿಯಾಗಿವೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ, ಸ್ಥಳೀಯರು ಇಬ್ಬರು ಮಹಿಳೆಯರ ಜತೆ ಜಗಳವಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದಾಗ, ಯಾವುದೇ ಕ್ರಮ ಕೈಗೊಳ್ಳಲು ಪೊಲೀಸರು ನಿರಾಕರಿಸಿದ್ದರು ಎಂದು ವಸಿಷ್ಠ ವಿವರಿಸಿದ್ದಾರೆ.