ಟ್ರಂಪ್ ವ್ಯಾಪಾರ ಸಮರ: 4 ಟ್ರಿಲಿಯನ್ ಡಾಲರ್ ಮೌಲ್ಯ ಕಳೆದುಕೊಂಡ ಅಮೆರಿಕದ ಷೇರು ಮಾರುಕಟ್ಟೆ

PC: x.com/jooilong
ನ್ಯೂಯಾರ್ಕ್: ಹಲವು ದೇಶಗಳ ಜತೆ ಸುಂಕಕ್ಕೆ ಸಂಬಂಧಿಸಿದ ವ್ಯಾಜ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತು ಅಮೆರಿಕದ ಫೆಡರಲ್ ಸರ್ಕಾರ ಆರ್ಥಿಕ ಹಿಂಜರಿತದ ಕಾರಣದಿಂದ ಸಂಭಾವ್ಯ ಶಟ್ಡೌನ್ ಘೋಷಿಸುವ ಭೀತಿ ಹಿನ್ನೆಲೆಯಲ್ಲಿ ಸೋಮವಾರ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಕಂಡುಬಂದಿದೆ.
ಕಳೆದ ವಾರದ ಕ್ಷಿಪ್ರ ಷೇರು ಮಾರಾಟ ಪ್ರವೃತ್ತಿ ಮುಂದುವರಿದಿದ್ದು, ಎಲ್ಲ ಪ್ರಮುಖ ಮೂರು ಸೂಚ್ಯಂಕಗಳು ಭಾರಿ ನಷ್ಟವನ್ನು ಅನುಭವಿಸಿದವು.
ಫೆಬ್ರುವರಿ 19ರಂದು ಸರ್ವಕಾಲಿಕ ಏರಿಕೆಯನ್ನು ದಾಖಲಿಸಿದ್ದ ಎಸ್ & ಪಿ ಇದೀಗ ಶೇಕಡ 8ರಷ್ಟು ಕುಸಿತ ಕಂಡಿದೆ. ನಸ್ಡಾಕ್ ಕಾಂಪೊಸಿಟ್ ಕಳೆದ ಡಿಸೆಂಬರ್ನಲ್ಲಿ ಸರ್ವಕಾಲಿಕ ಎತ್ತರವನ್ನು ತಲುಪಿ ಇದೀಗ ಶೇಕಡ 10ರಷ್ಟು ಇಳಿಕೆ ದಾಖಲಿಸಿದೆ. ಆರ್ಥಿಕ ಅನಿಶ್ಚಿತತೆ, ಸಂಭಾವ್ಯ ಆರ್ಥಿಕ ಹಿಂಜರಿಕೆ ಭೀತಿ ಮತ್ತು ಸುಂಕಕ್ಕೆ ಸಂಬಂಧಿಸಿದ ಸಂಘರ್ಷಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಷೇರು ಮಾರಾಟ ಹೆಚ್ಚುತ್ತಿದ್ದು, ಮಾರುಕಟ್ಟೆ ಮೌಲ್ಯದಲ್ಲಿ ಹಲವು ಟ್ರಿಲಿಯನ್ ಡಾಲರ್ಗಳಷ್ಟು ನಷ್ಟ ದಾಖಲಾಗಿದೆ.
ಐತಿಹಾಸಿಕ ಸರಾಸರಿಗೆ ಹೋಲಿಸಿದರೆ ಷೇರು ಮೌಲ್ಯಮಾಪನ ಅತ್ಯಧಿಕವಾಗಿರುವುದು, ವ್ಯಾಪಾರ ನೀತಿ ಬದಲಾವಣೆಯಿಂದ ಆರ್ಥಿಕ ಅನಿಶ್ಚಿತತೆಯ ವಾತಾವರಣ ಮತ್ತು ಕಾರ್ಪೊರೇಟ್ ವಲಯದ ನಿರಾಶಾದಾಯಕ ಗಳಿಕೆ ಷೇರು ಮಾರುಕಟ್ಟೆ ಪತನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಉದಾಹರಣೆಗೆ ಟೆಸ್ಲಾ ಷೇರು ಮೌಲ್ಯ ಒಂದೇ ದಿನದಲ್ಲಿ 125 ಶತಕೋಟಿ ಡಾಲರ್ನಷ್ಟು ಕುಸಿತ ಕಂಡಿದೆ. ಇದರ ಜತೆಗೆ ಆರ್ಥಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಡೆಲ್ಟಾ ಏರ್ಲೈನ್ಸ್ ತನ್ನ ಲಾಭದ ಅಂದಾಜನ್ನು ಕಡಿತಗೊಳಿಸಿದೆ. ಆರ್ಥಿಕತೆಯನ್ನು ಸ್ಥಿರತೆಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು, ಅದರಲ್ಲೂ ಮುಖ್ಯವಾಗಿ ಮುಂಬರುವ ಹಣದುಬ್ಬರ ವರದಿಗಳನ್ನು, ಬಡ್ಡಿದರ ನೀತಿಗಳನ್ನು ಹೂಡಿಕೆದಾರರು ಕಾತರದಿಂದ ಕಾಯುತ್ತಿದ್ದಾರೆ.
ಫೆಬ್ರುವರಿ 19ರಂದು ಸರ್ವಕಾಲಿಕ ಏರಿಕೆಯನ್ನು ದಾಖಲಿಸಿದ್ದ ಎಸ್ & ಪಿ 500 ಸೂಚ್ಯಂಕ ಶೇಕಡ 8.6ರಷ್ಟು ಕುಸಿತ ಕಂಡಿದ್ದು, ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 4 ಟ್ರಿಲಿಯನ್ನಷ್ಟು ಇಳಿಕೆಯಾಗಿದೆ. ಅಂತೆಯೇ ನಾಸ್ಡಾಕ್ ಸೂಚ್ಯಂಕ ಡಿಸೆಂಬರ್ನ ಉಬ್ಬರದ ಬಳಿಕ ಶೇಕಡ 10ರಷ್ಟು ಕುಸಿತ ಕಂಡಿದೆ.