ಪ್ರಪಂಚದಾದ್ಯಂತ ಯುದ್ಧ ನಿಲ್ಲಿಸಲು ಶ್ರಮಿಸಲಿದ್ದೇನೆ: ವಿಜಯ ಭಾಷಣದಲ್ಲಿ ಟ್ರಂಪ್ ಹೇಳಿಕೆ
ಡೊನಾಲ್ಡ್ ಟ್ರಂಪ್ | PC : PTI
ಹೊಸದಿಲ್ಲಿ: ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಡೊನಾಲ್ಡ್ ಟ್ರಂಪ್ ಮತ್ತೆ ಶ್ವೇತಭವನ ಪ್ರವೇಶಿಸಲು ಸಜ್ಜಾಗಿದ್ದಾರೆ, ಅವರ ವಿಜಯ ಭಾಷಣದಲ್ಲಿ ಪ್ರಪಂಚದಾದ್ಯಂತದ ಯುದ್ಧಗಳನ್ನು ಕೊನೆಗೊಳಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.
ನಾನು ಯುದ್ಧವನ್ನು ಬಯಸುವುದಿಲ್ಲ, ನಾನು ಯುದ್ಧಗಳನ್ನು ನಿಲ್ಲಿಸಲಿದ್ದೇನೆ. ನನ್ನ ಆಡಳಿತದ ನಾಲ್ಕು ವರ್ಷಗಳಲ್ಲಿ ನಾವು ಯಾವುದೇ ಯುದ್ಧಗಳನ್ನು ನಡೆಸಿರಲಿಲ್ಲ ಎಂದು ಟ್ರಂಪ್ ತನ್ನ ವಿಜಯ ಭಾಷಣದಲ್ಲಿ ಹೇಳಿದ್ದಾರೆ.
ಯುದ್ಧ ಕೊನೆಗೊಳಿಸಲು ನಾವು ಬದ್ಧರಾಗಿದ್ದೇವೆ. ಒಳನುಸುಳುವಿಕೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಈಗ ಯಾರೂ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್ ನಲ್ಲಿ ನಡೆದ ಚುನಾವಣಾ ವೀಕ್ಷಣಾ ಕಾರ್ಯಕ್ರಮದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಈ ಗೆಲುವು ಹಿಂದೆಂದೂ ಕಂಡಿರದ ರಾಜಕೀಯ ಗೆಲುವು. ನಾನು ಅಮೆರಿಕಾದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಾವು ನಮ್ಮ ಗಡಿಗಳನ್ನು ಸರಿಪಡಿಸಲು ಹೊರಟಿದ್ದೇವೆ, ನಮ್ಮ ದೇಶದ ಎಲ್ಲಾ ಸಮಸ್ಯೆಯನ್ನು ಸರಿಪಡಿಸುತ್ತೇವೆ. ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.