ಸತ್ಯಕ್ಕೆ ಎಂದಿಗೂ ಗೆಲುವಾಗುತ್ತದೆ : ಧರ್ಮೇಂದ್ರ ಪ್ರಧಾನ್
ನೀಟ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇಂದ್ರ ಶಿಕ್ಷಣ ಸಚಿವರ ಟ್ವೀಟ್
ಧರ್ಮೇಂದ್ರ ಪ್ರಧಾನ್ | PC : PTI
ಹೊಸದಿಲ್ಲಿ: 2024ರ ನೀಟ್-ಯುಜಿ ಪರೀಕ್ಷೆಯ ಪಾವಿತ್ರ್ಯದಲ್ಲಿ ಯಾವುದೇ ವ್ಯವಸ್ಥಿತ ಸೋರಿಕೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದು ಈ ಕುರಿತ ಸರಕಾರದ ನಿಲುವನ್ನು ಸಮರ್ಥಿಸಿದೆ ಎಂದು ಶುಕ್ರವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವಾರು ಅಕ್ರಮಗಳು ನಡೆದಿವೆ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಧರ್ಮೇಂದ್ರ ಪ್ರಧಾನ್, “ಕೆಲ ಕಾಲ ಸೂರ್ಯನಂಥ ಸತ್ಯವನ್ನು ಮೋಡದಂಥ ಸುಳ್ಳುಗಳು ಮರೆ ಮಾಡಬಹುದು. ಆದರೆ, ಸತ್ಯ ಎಂದಿಗೂ ಗೆಲ್ಲುತ್ತದೆ. ಸುಪ್ರೀಂ ಕೋರ್ಟ್ ತೀರ್ಪು ಈ ಸಂಬಂಧ ಸೃಷ್ಟಿಸಲಾದ ಎಲ್ಲ ಅಪಪ್ರಚಾರಗಳನ್ನು ನಿರಾಕರಿಸಿದೆ” ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಪರೀಕ್ಷಾ ಪಾವಿತ್ರ್ಯದಲ್ಲಿ ವ್ಯವಸ್ಥಿತ ಸೋರಿಕೆಯಾಗಿಲ್ಲ ಎಂಬ ಕಾರಣಕ್ಕೆ ವಿವಾದಾತ್ಮಕ 2024ರ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
“ನೀಟ್-ಯುಜಿ ಪರೀಕ್ಷೆಯ ಪಾವಿತ್ರ್ಯದಲ್ಲಿ ಯಾವುದೇ ಬಗೆಯ ವ್ಯವಸ್ಥಿತ ಸೋರಿಕೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿರುವುದರಿಂದ, ಮರು ಪರೀಕ್ಷೆ ಇಲ್ಲ ಎಂಬ ಸರಕಾರದ ನಿಲುವನ್ನು ಸಮರ್ಥಿಸಿದೆ. ಸೋರಿಕೆ ರಹಿತ, ಪಾರದರ್ಶಕ ಹಾಗೂ ಶೂನ್ಯ ಲೋಪದ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೊಳಿಸಲು ಸರಕಾರ ಬದ್ಧವಾಗಿದೆ” ಎಂದೂ ಅವರು ಹೇಳಿದ್ದಾರೆ.
“ಇವೆಲ್ಲವನ್ನೂ ಖಾತರಿ ಪಡಿಸಲು ತಜ್ಞರ ಉನ್ನತ ಸಮಿತಿಯು ಸಲ್ಲಿಸುವ ಶಿಫಾರಸುಗಳನ್ನು ಆದಷ್ಟೂ ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು. ಪತ್ತೆಯಾಗಿರುವ ವಾಸ್ತವಾಂಶಗಳು ಹಾಗೂ ನ್ಯಾಯಾಲಯದ ತೀರ್ಪು ಈ ವಿಷಯದಲ್ಲಿ ಹರಡಲಾಗಿದ್ದ ಅಪಪ್ರಚಾರವನ್ನು ನಿರಾಕರಿಸಿದೆ. ಲಕ್ಷಾಂತರ ಕಠಿಣ ಪರಿಶ್ರಟಮದ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸಿ, ನ್ಯಾಯವನ್ನು ಒದಗಿಸಿದ ಸುಪ್ರೀಂ ಕೋರ್ಟ್ ಗೆ ನಾವು ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇವೆ. ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಅಕ್ಷರಶಃ ಜಾರಿಗೊಳಿಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.
ಜೂನ್ 22ರಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಕಾರ್ಯವಿಧಾನವನ್ನು ಪರಾಮರ್ಶೆ ಮಾಡಿ, ಪರೀಕ್ಷಾ ಸುಧಾರಣೆಯ ಕುರಿತು ಶಿಫಾರಸು ಮಾಡಲು ಕೇಂದ್ರ ಶಿಕ್ಷಣ ಸಚಿವಾಲಯವು ಮಾಜಿ ಇಸ್ರೊ ಮುಖ್ಯಸ್ಥ ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ಏಳು ಸದಸ್ಯರ ಉನ್ನತ ಸಮಿತಿಯನ್ನು ರಚಿಸಿತ್ತು.