ಆರೆಸ್ಸೆಸ್ ಮಾಜಿ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಕುರಿತು ಟ್ವೀಟ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಕೇಸ್
ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮಾಜಿ ಮುಖ್ಯಸ್ಥ ಎಂ.ಎಸ್. ಗೋಲ್ವಾಲ್ಕರ್ ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಇಂದೋರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಾಂಗ್ರೆಸ್ ನಾಯಕರುಗಳು "ತಪ್ಪು ಮಾಹಿತಿ" ಹರಡುತ್ತಿದ್ದಾರೆ ಮತ್ತು "ಸುಳ್ಳು" ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ದ್ವೇಷವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಆರೆಸ್ಸೆಸ್ ಮುಖ್ಯಸ್ಥ ಗೋಲ್ವಾಲ್ಕರ್ ಸಾಮಾಜಿಕ ಮತಬೇಧಗಳನ್ನು ತೊಡೆದುಹಾಕಲು ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸಲು ತಮ್ಮ ಜೀವನದುದ್ದಕ್ಕೂ ಕೆಲಸ ಮಾಡಿದ್ದಾರೆ ಎಂದು ಚೌಹಾಣ್ ಹೇಳಿದರು.
ದಿಗ್ವಿಜಯ ಸಿಂಗ್ ಅವರು ಪುಸ್ತಕದ ಆಧಾರದಲ್ಲಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಬಿಜೆಪಿಗೆ ನಮ್ಮ ಪಕ್ಷದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಎಂ.ಎಸ್. ಗೋಲ್ವಾಲ್ಕರ್ ಆರೆಸ್ಸೆಸ್ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು 1940-73ರ ಅವಧಿಯಲ್ಲಿ ಸಂಘಟನೆಯ ಚುಕ್ಕಾಣಿ ಹಿಡಿದಿದ್ದರು.
ದಿಗ್ವಿಜಯ ಸಿಂಗ್ ನಿನ್ನೆ ಮಾಜಿ ಆರೆಸ್ಸೆಸ್ ಮುಖ್ಯಸ್ಥ ಗೋಲ್ವಾಲ್ಕರ್ ಅವರ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ಹೊಂದಿರುವ ಪುಸ್ತಕದ ಪುಟವನ್ನು ಟ್ವೀಟ್ ಮಾಡಿದ್ದರು..
ವಕೀಲ ಹಾಗೂ ಆರೆಸ್ಸೆಸ್ ಕಾರ್ಯಕರ್ತ ರಾಜೇಶ್ ಜೋಶಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಇಂದೋರ್ನಲ್ಲಿ ಶನಿವಾರ ರಾತ್ರಿ ದಿಗ್ವಿಜಯ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ, 469, 500 ಹಾಗೂ 505 ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತುಕೋಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದರು.