ವ್ಯಕ್ತಿಯೊಬ್ಬನನ್ನು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ನಕಲಿ ಆಧಾರ್ ಕಾರ್ಡ್, ಸಾಮಾಜಿಕ ಮಾಧ್ಯಮ ಖಾತೆ ಸೃಷ್ಟಿ: ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಥಾಣೆ: ಲಕ್ನೊ ಮೂಲದ ವ್ಯಕ್ತಿಯೊಬ್ಬರನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಥಾಣೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡಿಸೆಂಬರ್ 30ರಂದು ಮಹಿಳೆಯೊಬ್ಬರ ದೂರನ್ನು ಆಧರಿಸಿ ಅಭಿಷೇಕ್ ಸಿಂಗ್ ಎಂಬ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆದರೆ, ತನಿಖೆಯ ವೇಳೆ, ಘಟನೆ ನಡೆದ ಸಂದರ್ಭದಲ್ಲಿ ಸದರಿ ವ್ಯಕ್ತಿಯು ಉತ್ತರ ಪ್ರದೇಶದಲ್ಲಿದ್ದ ಸಂಗತಿ ಬೆಳಕಿಗೆ ಬಂದಿತ್ತು ಎಂದು ಪೂರ್ವ ಬದ್ಲಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.
“ಈ ಸಂಬಂಧ ನಾವು ಇನ್ನಷ್ಟು ಆಳವಾಗಿ ತನಿಖೆ ನಡೆಸಿದೆವು. ಈ ವೇಳೆ ಅಭಿಷೇಕ್ ಸಿಂಗ್ ರನ್ನು ಪ್ರಕರಣದಲ್ಲಿ ಸಿಲುಕಿಸುವ ಪಿತೂರಿಯನ್ನು ಸುನ್ನಿ ಚೌಹಾಣ್ ಹಾಗೂ ಅವರ ಸಹಚರರು ಹೆಣೆದಿರುವ ಸಂಗತಿ ಪತ್ತೆಯಾಯಿತು. ಇಬ್ಬರಿಗೂ ಪರಸ್ಪರ ಪರಿಚಯವಿತ್ತು. ತಮ್ಮ ಸಹಚರ ಪ್ರಥಮೇಶ್ ಯಾದವ್ ನನ್ನು ಅಭಿಷೇಕ್ ಸಿಂಗ್ ನಿವಾಸಕ್ಕೆ ಕಳಿಸಿದ್ದ ಸುನ್ನಿ ಚೌಹಾಣ್, ಪಿತೂರಿಯ ಭಾಗವಾಗಿ ಮಹಿಳೆಯೊಂದಿಗೆ ಮಾತುಕತೆ ನಡೆಸಲು ನಕಲಿ ಸಾಮಾಜಿಕ ಖಾತೆಯನ್ನು ಸೃಷ್ಟಿಸಿದ್ದ” ಎಂದು ಅವರು ತಿಳಿಸಿದ್ದಾರೆ.
ಭವೇಶ್ ತೋತ್ಲಾನಿ ಎಂದು ಗುರುತಿಸಲಾಗಿರುವ ವ್ಯಕ್ತಿಯೊಬ್ಬರೊಂದಿಗೆ ನಕಲಿ ಆಧಾರ್ ಕಾರ್ಡ್ ಬಳಸಿ ತನ್ನನ್ನು ತಾನು ಅಭಿಷೇಕ್ ಸಿಂಗ್ ಎಂದು ಗುರುತಿಸಿಕೊಂಡು ಚೌಹಾಣ್ ಹೋಟೆಲ್ ಕೋಣೆಯನ್ನು ಬಾಡಿಗೆಗೆ ಪಡೆದಿದ್ದ. ಆ ಲಾಡ್ಜ್ ಗೆ ಬಂದಿದ್ದ ಮಹಿಳೆಯು, ನಂತರ ಅಭಿಷೇಕ್ ಸಿಂಗ್ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು. ಈ ಸಂಬಂಧ ಚೌಹಾಣ್ ಹಾಗೂ ಯಾದವ್ ರನ್ನು ಬಂಧಿಸಲಾಗಿದ್ದು, ಮಹಿಳೆ ತೋತ್ಲಾನಿ ಇನ್ನೂ ತಲೆ ಮರೆಸಿಕೊಂಡಿದ್ದಾಳೆ” ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.