ಪ್ರಚೋದನಕಾರಿ ಭಾಷಣ: ಮಿಥುನ್ ಚಕ್ರವರ್ತಿ ವಿರುದ್ಧ ಎರಡು ಎಫ್ಐಆರ್ ದಾಖಲು
ಮಿಥುನ್ ಚಕ್ರವತಿ (Photo: PTI)
ಕೋಲ್ಕತ್ತಾ: ಕಳೆದ ತಿಂಗಳು ಕೋಲ್ಕತ್ತಾ ಬಳಿಯ ಸಾಲ್ಟ್ ಲೇಕ್ ಪ್ರದೇಶದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನಟ, ರಾಜಕಾರಣಿ ಮಿಥುನ್ ಚಕ್ರವತಿ ವಿರುದ್ಧ ಎರಡು ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 27ರಂದು ಸಾಲ್ಟ್ ಲೇಕ್ ನಲ್ಲಿನ ಈಸ್ಟರ್ನ್ ಝೋನಲ್ ಕಲ್ಚರಲ್ ಸೆಂಟರ್ ನಲ್ಲಿ ಮಿಥುನ್ ಚಕ್ರವತಿ ಮಾಡಿದ್ದ ಭಾಷಣಕ್ಕೆ ಸಂಬಂಧಿಸಿದಂತೆ ಈ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲು ಕೋಲ್ಕತ್ತಾಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವ್ಯಕ್ತಿಯೊಬ್ಬರು ನೀಡಿರುವ ದೂರನ್ನು ಆಧರಿಸಿ ಮೊದಲ ಎಫ್ಐಆರ್ ದಕ್ಷಿಣ ಬಿಧನ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದರೆ, ಎರಡನೆ ಎಫ್ಐಆರ್ ಅನ್ನು ಬೌಬಝಾರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
"ಈ ಪ್ರಕರಣದ ಸಂಬಂಧ ನಾವೀಗಾಗಲೇ ತನಿಖೆ ಪ್ರಾರಂಭಿಸಿದ್ದೇವೆ” ಎಂದು ಬಿಧನ್ ನಗರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮಿಥುನ್ ಚಕ್ರವರ್ತಿ ಪ್ರತಿಕ್ರಿಯೆಗೆ ಲಭ್ಯವಾಗದಿದ್ದರೂ, ಇದು ರಾಜಕೀಯ ಪ್ರೇರಿತ ಕ್ರಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ.