ನಾಲ್ಕು ಎನ್ ಸಿಆರ್ ಜಿಲ್ಲೆಗಳಲ್ಲಿ ಕೋಮುಸಂಘರ್ಷ: ಇಬ್ಬರು ಗೃಹರಕ್ಷಕ ಸಿಬ್ಬಂದಿ ಮೃತ್ಯು
Photo: PTI
ಗುರುಗ್ರಾಮ: ಜಿಲ್ಲೆಯ ಮೂಲಕ ಹಾದುಹೋಗುತ್ತಿದ್ದ ಧಾರ್ಮಿಕ ಮೆರವಣಿಗೆ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಗೃಹರಕ್ಷಕ ದಳದ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಹಿಂಸಾಚಾರದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದಾರೆ.
ನುಹ್ ಪ್ರದೇಶದಲ್ಲಿ ಕೋಮು ಸಂಘರ್ಷ ಆರಂಭವಾಗಿದ್ದು, ಪಲ್ವಾಲ್, ಫರೀದಾಬಾದ್ ಹಾಗೂ ಗುರುಗಾಂವ್ ಗೆ ಹರಡಿದೆ. ದಕ್ಷಿಣ ಗುರುಗಾಂವ್ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಒಂದು ಸಮುದಾಯದ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಮತ್ತೊಂದು ಕೋಮಿಗೆ ಸೇರಿದವರು ದಾಳಿ ನಡೆಸಿದ್ದಾರೆ. ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಕಲ್ಲುತೂರಾಟದ ಘಟನೆಗಳು ಕೂಡಾ ನಡೆದಿವೆ.
ಸೋಮವಾರದ ನಡೆದ ದಾಳಿಯಲ್ಲಿ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ 13 ಮಂದಿ ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನುಹ್ ಹಿಂಸಾಚಾರದಲ್ಲಿ ಗಾಯಗೊಂಡಿರುವ ಅನಿಲ್ ಎಂಬ ಇನ್ಸ್ಪೆಕ್ಟರ್ ಅವರ ಹೊಟ್ಟೆಗೆ ಗುಂಡೇಟು ತಗುಲಿದ್ದು, ಡಿವೈಎಸ್ಪಿ ಸಜ್ಜನ್ ಸಿಂಗ್ ಎಂಬವರ ತಲೆಗೆ ಗಂಭೀರ ಗಾಯಗಳಾಗಿವೆ. ಕನಿಷ್ಠ 16 ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಹುತೇಕ ಸೋಹ್ನಾ ಮತ್ತು ನುಹ್ನಲ್ಲಿ ಆಕ್ರೋಶಕ್ಕೆ ಈ ವಾಹನಗಳು ಗುರಿಯಾಗಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಕೃತ್ಯದ ವಿಡಿಯೊಗಳು ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರ ನುಹ್ನಲ್ಲಿ ಇಂಟರ್ ನೆಟ್ ಹಾಗೂ ಎಸ್ಎಂಎಸ್ ಸೇವೆ ಸ್ಥಗಿತಗೊಳಿಸಿದೆ. ಫರೀದಾಬಾದ್ನಲ್ಲಿ ಬುಧವಾರದ ವರೆಗೆ ಇಂಟರ್ ನೆಟ್ ಸೇವೆ ರದ್ದುಪಡಿಸಲಾಗಿದೆ.