ಎಲ್ಎಸಿಯಲ್ಲಿ ಭಾರತ-ಚೀನಾ ಪಡೆಗಳ ಘರ್ಷಣೆಯ ಎರಡು ಘಟನೆಗಳು ತಡವಾಗಿ ಬೆಳಕಿಗೆ
2021ರ ಸೆಪ್ಟೆಂಬರ್, 2022ರ ನವೆಂಬರ್ ನಲ್ಲಿ ನಡೆದಿದ್ದ ಘರ್ಷಣೆ ; ಪಶ್ಚಿಮಕಮಾಂಡ್ ನ ಶೌರ್ಯಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೀಡಿಯೊದಲ್ಲಿ ಬಹಿರಂಗ
ಹೊಸದಿಲ್ಲಿ: ವಾಸ್ತವ ಗಡಿನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತೀಯ ಸೇನೆ ಹಾಗೂ ಚೀನಿ ಪಡೆಗಳ ನಡುವೆ 2021ರ ಸೆಪ್ಟೆಂಬರ್ ಹಾಗೂ 2022ರ ನವೆಂಬರ್ ನಲ್ಲಿ ಎರಡು ಘರ್ಷಣೆಗಳು ನಡೆದಿರುವುದು ಈಗ ತಡವಾಗಿ ಬಹಿರಂಗವಾಗಿದೆ. ಭಾರತೀಯ ಸೇನಾ ಯೋಧರಿಗೆ ಶೌರ್ಯ ಪುರಸ್ಕಾರಗಳನ್ನು ಪ್ರದಾನ ಮಾಡಿದ ಸಂದರ್ಭ ಈ ಬಗ್ಗೆ ಉಲ್ಲೇಖಗಳನ್ನು ಮಾಡಿದ್ದರಿಂದ ಈ ವಿಷಯವು ಬೆಳಕಿಗೆ ಬಂದಿದೆ. ಕಳೆದ ವಾರ ನಡೆದ ಭಾರತೀಯ ಸೇನೆಯ ಪಶ್ಚಿಮ ಕಮಾಂಡ್ ನ ಪದವಿಪ್ರದಾನ ಕಾರ್ಯಕ್ರಮದಲ್ಲಿ ಈ ಬಗ್ಗೆ ಉಲ್ಲೇಖಗಳನ್ನು ಮಾಡಲಾಗಿದೆ. ವಾಸ್ತವ ಗಡಿನಿಯಂತ್ರಣ ರೇಖೆಯುದ್ದಕ್ಕೂ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ)ಯ ಸೈನಿಕರು ಪ್ರದರ್ಶಿಸಿದ ಆಕ್ರಮಣಕಾರಿ ನಡವಳಿಕೆಗೆಳಿಗೆ ಭಾರತೀಯ ಯೋಧರು ಹೇಗೆ ದೃಢವಾಗಿ ಪ್ರತಿಕ್ರಿಯಿಸಿದರೆಂಬುದನ್ನು ಶೌರ್ಯಪ್ರಶಸ್ತಿ ಪ್ರದಾನ ವೇಳೆ ಪ್ರಶಂಸಿಸಲಾಗಿತ್ತು.
ಚಂಡಿಮಂದಿರ್ ನಲ್ಲಿ ಮುಖ್ಯ ಕಾರ್ಯಾಲಯವನ್ನು ಹೊಂದಿರುವ ಸೇನೆಯ ಪಶ್ಚಿಮಕಮಾಂಡ್ ನ ಪದವಿಪ್ರದಾನ ಸಮಾರಂಭದ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಶೌರ್ಯಪ್ರಶಸ್ತಿಗಳ ಕುರಿತಾದ ವಿವರಣೆಗಳನ್ನು ಅದು ಒಳಗೊಂಡಿತ್ತು. ಅದರಲ್ಲಿ ಮಾಡಲಾದ ಉಲ್ಲೇಖಗಳ ಪ್ರಕಾರ 2021ರ ಸೆಪ್ಟೆಂಬರ್ ಹಾಗೂ 2022ರ ನವೆಂಬರ್ ನಲ್ಲಿ ಈ ಎರಡು ಘಟನೆಗಳು ನಡೆದಿವೆ. ಈ ಬೆಳವಣಿಗೆಗಳ ಕುರಿತಾಗಿ ಸೇನೆಯು ಈವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿಲ್ಲ. ಆದರೆ ಸೋಮವಾರ ಈ ವೀಡಿಯೊ ನಿಷ್ಕ್ರಿಯಗೊಂಡಿತ್ತು.
ಪದವಿಪ್ರದಾನ ಕಾರ್ಯಕ್ರಮದಲ್ಲಿ ಚೀನಿ ಅತಿಕ್ರಮಣವನ್ನು ಮಟ್ಟಹಾಕಿದ ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದ ಹಲವಾರು ಭಾರತೀಯ ಸೇನಾ ಸಿಬ್ಬಂದಿಯನ್ನು ಗೌರವಿಸಲಾಗಿತ್ತು ಹಾಗೂ ಚೀನಿ ಯೋಧರ ಆಕ್ರಮಣಕಾರಿ ನಡವಳಿಕೆಗೆ ಭಾರತೀಯ ಯೋಧರು ನೀಡಿದ ದೃಢವಾದ ಪ್ರತಿಕ್ರಿಯೆಯನ್ನು ಕಾರ್ಯಕ್ರಮದಲ್ಲಿ ಪ್ರಶಂಸಿಸಲಾಗಿತ್ತು.
2020ರ ಜೂನ್ ನಲ್ಲಿ ಗಲ್ವಾನ್ ಕಣಿವೆಯಲ್ಲಿ ಘರ್ಷಣೆಗಳು ನಡೆದ ಬಳಿಕ 3488 ಕಿ.ಮೀ. ವಿಸ್ತೀರ್ಣದ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್ಎಸಿ)ಯುದ್ದಕ್ಕೂ ಭಾರತೀಯ ಸೇನೆಯು ಸಮರಸನ್ನದ್ಧ ಸ್ಥಿತಿಯನ್ನು ಕಾಯ್ದುಕೊಂಡಿತ್ತು.
2020ರ ಮೇನಲ್ಲಿ ಪೂರ್ವ ಲಡಾಕ್ನಲ್ಲಿ ಆರಂಭಗೊಂಡ ಗಡಿವಿವಾದದ ಹಿನ್ನೆಲೆಯಲ್ಲಿ ಭಾರತ ಹಾಗೂ ಚೀನಿ ಪಡೆಗಳ ನಡುವೆ ಹಲವಾರು ಭಾರಿ ಸಣ್ಣಪಟ್ಟ ಘರ್ಷಣೆಗಳು ನಡೆದಿದ್ದವು. 2022ರ ಡಿಸೆಂಬರ್ 9ರಂದು ಚೀನಿ ಪಡೆಗಳು ಎಲ್ಎಸಿಯ ತವಾಂಗ್ ವಲಯವನ್ನು ಅತಿಕ್ರಮಿಸಲು ನಡೆಸಿದ ಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದರು.
ಈ ಘಟನೆ ನಡೆದ ನಾಲ್ಕು ದಿನಗಳ ಬಳಿಕ ರಾಜನಾಥ ಸಿಂಗ್ ಅವರು ಸಂಸತ್ನಲ್ಲಿ ಈ ಬಗ್ಗೆ ಹೇಳಿಕೆಯೊಂದನ್ನು ನೀಡಿ, ತವಾಂಗ್ವಲಯವನ್ನು ಅತಿಕ್ರಮಿಸುವ ಚೀನದ ಯತ್ನವನ್ನು ಭಾರತೀಯ ಪಡೆಗಳು ದೃಢವಾಗಿ ಎದುರಿಸಿದವು ಎಂದು ಹೇಳಿದರು.