ಯುಎಇಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಇಬ್ಬರು ಭಾರತೀಯರ ಅಂತ್ಯಸಂಸ್ಕಾರ ನಡೆಸಲಾಗಿದೆ : ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯ
ಶಹಝಾದಿ ಖಾನ್, ಮುಹಮ್ಮದ್ ರಿನಾಶ್ ಅವರನ್ನು ಗಲ್ಲಿಗೇರಿಸಿದ ಯುಎಇ

Photo | indianexpress.com
ಯುಎಇ : ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾದ ಇಬ್ಬರು ಭಾರತೀಯ ಪ್ರಜೆಗಳಾದ ಶಹಝಾದಿ ಖಾನ್ ಮತ್ತು ಮುಹಮ್ಮದ್ ರಿನಾಶ್ ಅರಂಗಿಲೊಟ್ಟು ಅವರನ್ನು ಗುರುವಾರ ಅವರ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಯುಎಇಯ ನಿಯಮಾವಳಿಗಳನ್ನು ಅನುಸರಿಸಿ ಶಹಝಾದಿ ಮತ್ತು ಮುಹಮ್ಮದ್ ಅರಂಗಿಲೊಟ್ಟು ಅವರನ್ನು ಸಮಾಧಿ ಮಾಡಲಾಗಿದೆ. ಯುಎಇಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ಮುರಳೀಧರನ್ ಪಿವಿ ಅವರ ಅಂತ್ಯಕ್ರಿಯೆಯು ಶೀಘ್ರದಲ್ಲೇ ನಡೆಯಲಿದೆ ಎಂದು ವರದಿಯಾಗಿದೆ.
ನಾಲ್ಕು ತಿಂಗಳ ಮಗುವಿನ ಕೊಲೆ ಪ್ರಕರಣದಲ್ಲಿ ಅಬುಧಾಬಿ ನ್ಯಾಯಾಲಯವು ತಪ್ಪಿತಸ್ಥೆ ಎಂದು ತೀರ್ಪು ನೀಡಿದ ತಿಂಗಳುಗಳ ನಂತರ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಶಹಝಾದಿ(33) ಅವರನ್ನು ಫೆಬ್ರವರಿ 15ರಂದು ಗಲ್ಲಿಗೇರಿಸಲಾಯಿತು.
ಕೇರಳದ ಕಣ್ಣೂರಿನ ನಿವಾಸಿಯಾಗಿರುವ ರಿನಾಶ್ ಅರಂಗಿಲೊಟ್ಟು, ಅಲ್ ಐನ್(Al Ain)ನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಯುಎಇ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥನೆಂದು ಗಲ್ಲಿಗೇರಿಸಲಾಯಿತು. ಭಾರತೀಯ ವಲಸಿಗನ ಹತ್ಯೆಗೆ ಸಂಬಂಧಿಸಿ ಕೇರಳದ ನಿವಾಸಿ ಮುರಳೀಧರನ್ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು.
ಯುಎಇ ನಿಯಮಾವಳಿಗಳ ಪ್ರಕಾರ ಭಾರತೀಯ ಪ್ರಜೆ ಶಹಝಾದಿ ಖಾನ್ ಮತ್ತು ರಿನಾಶ್ ಅರಂಗಿಲೊಟ್ಟು ಅವರ ಅಂತ್ಯಕ್ರಿಯೆಯನ್ನು ಗುರುವಾರ ಅಬುಧಾಬಿಯಲ್ಲಿ ನಡೆಸಲಾಯಿತು. ಎರಡೂ ಕುಟುಂಬದ ಪ್ರತಿನಿಧಿಗಳು ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಬಳಿಕ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.