ಉಕ್ರೇನ್ ದಾಳಿ: ರಶ್ಯ ಸೇನೆ ನೇಮಿಸಿದ್ದ ಇಬ್ಬರು ಭಾರತೀಯರು ಮೃತ್ಯು
ಸಾಂದರ್ಭಿಕ ಚಿತ್ರ | PC : ANI
ಹೊಸದಿಲ್ಲಿ: ರಶ್ಯ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ರಶ್ಯ ಸೇನೆಯು ನೇಮಕ ಮಾಡಿಕೊಂಡಿದ್ದ ಇಬ್ಬರು ಭಾರತೀಯರು ಇತ್ತೀಚೆಗೆ ಮೃತಪಟ್ಟಿದ್ದಾರೆ ಎಂದು ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
“ಮೃತರ ಕುಟುಂಬದ ಸದಸ್ಯರಿಗೆ ನಾವು ನಮ್ಮ ತೀವ್ರ ಸಂತಾಪವನ್ನು ಸೂಚಿಸುತ್ತೇವೆ” ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಹೇಳಿದೆ. “ಮಾಸ್ಕೊದಲ್ಲಿನ ನಮ್ಮ ರಾಜತಾಂತ್ರಿಕರು ರಕ್ಷಣಾ ಸಚಿವಾಲಯ ಸೇರಿದಂತೆ ರಶ್ಯ ಪ್ರಾಧಿಕಾರಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಮೃತರ ಪಾರ್ಥಿವ ಶರೀರವನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ರವಾನಿಸಬೇಕು ಎಂದು ಒತ್ತಡ ಹೇರುತ್ತಿದ್ದಾರೆ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಫೆಬ್ರವರಿ 24, 2022ರಂದು ರಶ್ಯವು ಉಕ್ರೇನ್ ಮೇಲೆ ಆಕ್ರಮಣ ನಡೆಸಿತ್ತು. ಇದರಿಂದಾಗಿ, ಎರಡನೆ ವಿಶ್ವ ಯುದ್ಧದ ನಂತರ ಇದೇ ಪ್ರಥಮ ಬಾರಿಗೆ ಯೂರೋಪ್ ನಲ್ಲಿ ಅತ್ಯಂತ ಮಾರಣಾಂತಿಕ ಯುದ್ಧ ನಡೆಯುತ್ತಿದೆ.
ರಶ್ಯ ಮತ್ತು ಉಕ್ರೇನ್ ನಡುವಿನ ಯುದ್ಧ ಸ್ಫೋಟಗೊಂಡ ನಂತರ, ಕೆಲ ಹಿರಿಯರೂ ಸೇರಿದಂತೆ ಕನಿಷ್ಠ ಪಕ್ಷ 500 ಮಂದಿ ಭಾರತೀಯರು ಉಕ್ರೇನ್ ನಲ್ಲಿ ಹೋರಾಟ ನಡೆಸಲು ರಶ್ಯ ಹುಟ್ಟು ಹಾಕಿರುವ ಅಂತಾರಾಷ್ಟ್ರೀಯ ಸೇನಾಪಡೆಗೆ ಸ್ವಯಂಸ್ಫೂರ್ತಿಯಿಂದ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ ಹಲವು ಮಂದಿ ಯುದ್ಧದಲ್ಲಿ ಮೃತಪಟ್ಟಿದ್ದರೆ, ಮತ್ತೆ ಕೆಲವರು ತಮ್ಮನ್ನು ವಂಚಿಸಿ, ರಶ್ಯ ಸೇನೆಗೆ ಸೇರ್ಪಡೆ ಮಾಡಲಾಗಿದೆ ಎಂದು ವಿಡಿಯೊ ಮಾಡಿ ಅಲವತ್ತುಕೊಂಡಿದ್ದರು. ಭಾರತ ಸರಕಾರದ ನೆರವಿಗಾಗಿ ಮೊರೆ ಇಟ್ಟಿದ್ದರು.