ಸಂಪುಟ ಸಭೆಯಿಂದ ನಿರ್ಗಮಿಸಿದ ಇಬ್ಬರು ಸಚಿವರು: ಹಿಮಾಚಲ ಪ್ರದೇಶದಲ್ಲಿ ಮತ್ತೆ ಕಾವೇರಿದ ರಾಜಕೀಯ
Photo: timesofindia.indiatimes.com
ಶಿಮ್ಲಾ: ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಸರಕಾರವು ಶೀಘ್ರದಲ್ಲೇ ಪತನವಾಗಲಿದೆ ಎಂಬ ಅನರ್ಹ ಶಾಸಕರೊಬ್ಬರ ಹೇಳಿಕೆ, ಪಂಚಕುಲದಲ್ಲಿ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಇತ್ತೀಚೆಗೆ ಬಂಡುಕೋರ ಶಾಸಕರೊಂದಿಗೆ ಸಭೆ ನಡೆಸಿರುವುದು ಹಾಗೂ ಶನಿವಾರ ನಡೆದ ಸಚಿವ ಸಂಪುಟ ಸಭೆಯಿಂದ ಸಚಿವರಾದ ರೋಹಿತ್ ಠಾಕೂರ್ ಹಾಗೂ ಜಗತ್ ಸಿಂಗ್ ಲನಿರ್ಗಮಿಸಿರುವುದು – ಈ ಎಲ್ಲ ಕಾರಣಗಳಿಂದ ಗಿರಿ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಮತ್ತೆ ರಾಜಕೀಯ ಕಾವೇರಿದೆ ಎಂದು timesofindia ವರದಿ ಮಾಡಿದೆ.
ಬಿಸಿಯೇರಿದ ವಾಗ್ವಾದಕ್ಕೆ ಸಾಕ್ಷಿಯಾದ ಸಂಪುಟ ಸಭೆಯಿಂದ ಶಿಕ್ಷಣ ಸಚಿವ ರೋಹಿತ್ ಠಾಕೂರ್ ಗಡಿಬಿಡಿಯಿಂದ ಹೊರ ನಡೆದದ್ದು ಕಂಡು ಬಂದಿದೆ. ಇದರ ಬೆನ್ನಿಗೇ ರೋಹಿತ್ ಠಾಕೂರ್ ರನ್ನು ಹಿಂಬಾಲಿಸಿರುವ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರನ್ನು ಮತ್ತೆ ಸಂಪುಟ ಸಭೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಈ ಕುರಿತು ಸ್ಪಷ್ಟೀಕರಣ ನೀಡಿರುವ ಠಾಕೂರ್, ನಾನು ಸಿಟ್ಟಿಗೆದ್ದಿರಲಿಲ್ಲ. ನನ್ನ ಪುತ್ರ ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿ ನಿಲಯಕ್ಕೆ ತೆರಳುತ್ತಿದ್ದುದರಿಂದ ನಾನು ಕೊಂಚ ಮುಂಚಿತವಾಗಿ ಸಂಪುಟ ಸಭೆಯಿಂದ ಹೊರ ನಡೆದೆ ಎಂದು ಹೇಳಿದ್ದಾರೆ. ಸಂಪುಟ ಸಭೆಯ ಕಾರ್ಯಸೂಚಿಯನ್ನು ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದಾಗ ನಾನು ಸಭೆ ಮುಕ್ತಾಯಗೊಳ್ಳುವವರೆಗೂ ಅಲ್ಲಿದ್ದೆ ಎಂದು ನಂತರ ಅವರು ಮಾಧ್ಯಮ ಮಂದಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಪ್ರಾರಂಭಗೊಂಡ ಆರಂಭದಲ್ಲಿ ವಿಕ್ರಮಾದಿತ್ಯ ಸಿಂಗ್ ತಮ್ಮ ರಾಜಿನಾಮೆಯನ್ನು ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು. ಇದರ ಬೆನ್ನಿಗೇ ಇನ್ನೂ ಹಲವಾರು ಸಚಿವರು ಹಾಗೂ ಶಾಸಕರು ಮುಖ್ಯಮಂತ್ರಿಯ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದ್ದಾರೆ ಎಂಬ ವದಂತಿಗಳು ಹರಡಿವೆ.
ಈ ನಡುವೆ, ನಮ್ಮೊಂದಿಗೆ ಇನ್ನೂ ಒಂಬತ್ತು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಬಂಡಾಯ ಶಾಸಕರು ಹೇಳಿಕೊಂಡಿದ್ದಾರೆ.