ಅದಾನಿ ಜೊತೆ ಸಂಧಾನಕ್ಕಾಗಿ ಇಬ್ಬರು ಸಂಸದರು ನನ್ನನ್ನು ಭೇಟಿಯಾಗಿದ್ದರು: ಮಹುವಾ ಮೊಯಿತ್ರಾ
ಮಹುವಾ ಮೊಯಿತ್ರಾ (Photo- PTI)
ಹೊಸದಿಲ್ಲಿ: ಅದಾನಿ ಗ್ರೂಪ್ನ ವರಿಷ್ಠ ಗೌತಮ್ ಆದಾನಿ ಹಾಗೂ ತನ್ನ ಮಧ್ಯೆ ಸಂಧಾನವೇರ್ಪಡಿಸುವುದಕ್ಕಾಗಿ ಇಬ್ಬರು ಲೋಕಸಭಾ ಸದಸ್ಯರು ಕಳೆದ ಮೂರು ವರ್ಷಗಳಿಂದ ತನ್ನನ್ನು ಭೇಟಿಯಾಗುತ್ತಿದ್ದರೆಂದು ಮೊಯಿತ್ರಾ ಆಪಾದಿಸಿದ್ದಾರೆ. ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆಯ ನೈತಿಕ ಸಮಿತಿಯು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿಚಾರಣೆ ನಡೆಸಲು ಸಿದ್ಧತೆ ನಡೆಸುತ್ತಿರುವ ನಡುವೆಯೇ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ತನ್ನ ವಿರುದ್ಧದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
‘‘ಕಳೆದ ಮೂರು ವರ್ಷಗಳಲ್ಲಿ ಅದಾನಿ ಅವರು ಇಬ್ಬರು ಲೋಕಸಭಾ ಸಂಸದರ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ತನ್ನೊಂದಿಗೆ ಸಂಧಾನ ಮಾತುಕತೆಗೆ ಬರುವಂತೆ ಹಾಗೂ ಈ ಬಗ್ಗೆ ಒಪ್ಪಂದವೊಂದನ್ನು ಕುದುರಿಸುವಂತೆ ಅವರು ಕೋರಿದ್ದರು. ಆದರೆ ಅದನ್ನು ನಾನು ತಿರಸ್ಕರಿಸಿದ್ದೆ. ಸಂಸತ್ನಲ್ಲಿ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳದಂತೆ ಮಾಡಲು ಅವರು ನಗದುಹಣವನ್ನು ನೀಡಲು ಮುಂದಾಗಿದ್ದರ ಎಂದರು. ಆದರೆ ತನಗೆ ಲಂಚದ ಅಮಿಷವೊಡ್ಡಿದ್ದರೆನ್ನಲಾದ ಲೋಕಸಭಾ ಸದಸ್ಯರ ಹೆಸರುಗಳನ್ನು ಮೊಯಿತ್ರಾ ಬಹಿರಂಗಪಡಿಸಲಿಲ್ಲ.
“ಈ ಎಲ್ಲಾ ವಿವಾದಗಳನ್ನು ಕೊನೆಗೊಳಿಸಲು ಹಾಗೂ ಚುನಾವಣೆ ಮುಗಿಯುವ ತನಕ ಅದಾನಿ ಬಗ್ಗೆ ಮಾತನಾಡಬಾರದೆಂಬ ಸಂದೇಶವೊಂದನ್ನು ಕಳೆದ ವಾರವಷ್ಟೇ ನನಗೆ ನೀಡಲಾಗಿತ್ತು” ಒಂದು ವೇಳೆ ನಿಮಗೆ ಅದಾನಿ ವಿರುದ್ಧ ವಾಗ್ದಾಳಿ ನಡೆಸಬೇಕೆಂದಿದ್ದರೆ, ಅದನ್ನು ಲಘುವಾದ ರೀತಿಯಲ್ಲಿ ಮಾಡಿರಿ. ಆದರೆ ಅದರಲ್ಲಿ ಪ್ರಧಾನಿ ಹೆಸರನ್ನು ಥಳಕುಹಾಕದಿರಿ’’ ಎಂಬುದಾಗಿ ನನಗೆ ತಿಳಿಸಲಾಗಿತ್ತು ಎಂದು ಮೊಯಿತ್ರಾ ಹೇಳಿದ್ದಾರೆ.
ಹೀರಾನಂದಾನಿ ಅವರ ಕಚೇರಿಗೆ ನನ್ನ ಲೋಕಸಭಾ ಕಲಾಪದ ಲಾಗಿನ್ ವಿವರಗಳನ್ನು ಹಂಚಿಕೊಂಡಿರುವುದನ್ನು ಮೊಯಿತ್ರಾ ಒಪ್ಪಿಕೊಂಡಿದ್ದಾರೆ. ಆದಾನಿಯವರ ಧಾಮ್ರಾ ಬಂದರು ಯೋಜನೆ ಕುರಿತು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ ಯಾವುದೇ ಹಿತಾಸಕ್ತಿಯ ಸಂಘರ್ಷವಿರಲಿಲ್ಲವೆಂದು ಅವರು ಹೇಳಿದ್ದಾರೆ. ಅಲ್ಲದೆ ಈ ಯೋಜನೆಯ ಪ್ರಕ್ರಿಯೆಯಲ್ಲಿ ಹೀರಾನಂದಾನಿ ಅವರು ಬಿಡ್ಡರ್ ಆಗಿರಲಿಲ್ಲವೆಂದೂ ಹೇಳಿದ್ದಾರೆ.
“ದರ್ಶನ್ ಹೀರಾನಂದಾನಿ ಅವರ ಕಚೇರಿಯ ಯಾರೋ ಒಬ್ಬರು ಟೈಪ್ ಮಾಡಿ ನನಗೆ ಕಳುಹಿಸಿದ ಪ್ರಶ್ನೆಯನ್ನು ಸಂಸತ್ನ ವೆಬ್ಸೈಟ್ನಲ್ಲಿ ನೀಡಿದ್ದೇನೆ. ಈ ಪ್ರಶ್ನೆಯನ್ನು ವೆಬ್ಸೈಟ್ನಲ್ಲಿ ಹಾಕಿದ ಆನಂತರ ನಾನು ಅವರಿಗೆ ಈ ಬಗ್ಗೆ ಮಾಹಿತಿ ನೀಡಲು ಕರೆ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ ನಾನು ಸದಾ ಬ್ಯುಸಿಯಾಗಿರುವುದರಿಂದ ನಾನು ಈ ಎಲ್ಲಾ ಪ್ರಶ್ನೆಗಳನ್ನು ಒಂದೇ ಸಲಕ್ಕೆ ಓದುತ್ತೇನೆ. ಈ ಪ್ರಶ್ನೆಯನ್ನು ವೆಬ್ಸೈಟ್ ಹಾಕಿದ ಬಳಿಕ ನನಗೆ ಮೊಬೈಲ್ ಫೋನ್ಗೆ ಓಟಿಪಿ ಬರುತ್ತದೆ. ನಾನು ಓಟಿಪಿ ಸಂಖ್ಯೆಯನ್ನು ಮಾತ್ರವೇ ನೀಡುತ್ತೇನೆ ಹಾಗೂ ಆನಂತರವಷ್ಟೇ ಪ್ರಶ್ನೆಯು ಸಲ್ಲಿಕೆಯಾಗುತ್ತದೆ. ಹೀಗಾಗಿ ನನ್ನ ಐಡಿಗೆ ದರ್ಶನ್ ಲಾಗ್ಇನ್ ಮಾಡುವುದು ಹಾಗೂ ಅವರದೇ ಪ್ರಶ್ನೆಗಳನ್ನು ಅಳವಡಿಸಿದ್ದಾರೆಂಬುದು ಹಾಸ್ಯಾಸ್ಪದವಾದುದು’’ ಎಂದು ಮೊಯಿತ್ರಾ ಹೇಳಿದ್ದಾರೆ.
ಪ್ರಶ್ನೆಗಾಗಿ ಹಣ ವಿವಾದಕ್ಕೆ ಸಂಬಂಧಿಸಿ ತನ್ನ ಪಕ್ಷದಿಂದಲೇ ಬೆಂಬಲ ವ್ಯಕ್ತವಾಗದೆ ಇರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಪ್ರಕರಣವು ಮಾಧ್ಯಮಗಳ ಸರ್ಕಸ್ ಆಗಿದ್ದು, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಉದ್ಯಮ ದಿಗ್ಗಜ ಗೌತಮ್ ಆದಾನಿಯವರನ್ನು ಗುರಿಯಿರಿಸಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಭಾರೀ ಮೊತ್ತದ ಲಂಚ ಹಾಗೂ ರುಷುವತ್ತುಗಳನ್ನು ಪಡೆದುಕೊಳ್ಳುತ್ತಿದ್ದರೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹಾಗೂ ಸುಪ್ರೀಂಕೋರ್ಟ್ ನ್ಯಾಯವಾದಿ ಜಯ್ ಆನಂತ್ ದೆಹಾದ್ರಾಯ್ ಅವರು ಆಪಾದಿಸಿದ್ದರು.